Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ನವೆಂಬರ್ 2026 › 1 ನವೆಂಬರ್

ಆರ್ಥೊಡಾಕ್ಸ್ ಪಂಚಾಂಗ · ಅಕ್ಟೋಬರ್ 19 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 1 ನವೆಂಬರ್ 2026

ಭಾನುವಾರ · ಸ್ವರ 5

ಹಬ್ಬಗಳು ಮತ್ತು ಸಂತರು

ಪಂಚಾಶತ್ತಮದ ನಂತರದ 22ನೇ ಭಾನುವಾರ

ಉಪವಾಸ

ಉಪವಾಸವಿಲ್ಲ

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಉದಯಕಾಲದ 11ನೇ ಸುವಾರ್ತೆ

ಯೋಹಾ 21:15–25

15ಅವರ ಊಟವಾದ ಮೇಲೆ ಯೇಸು ಸೀಮೋನ್ ಪೇತ್ರನಿಗೆ, “ಯೋಹಾನನ ಮಗನಾದ ಸೀಮೋನನೇ, ನೀನು ಇವರಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತಿಯೋ?” ಎಂದು ಕೇಳಲು ಅವನು “ಹೌದು, ಕರ್ತನೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂದು ನೀನೇ ಬಲ್ಲೆ” ಎಂದನು. ಆತನು ಅವನಿಗೆ, “ನನ್ನ ಕುರಿಮರಿಗಳನ್ನು ಮೇಯಿಸು” ಎಂದು ಹೇಳಿದನು. 16ಆತನು ತಿರುಗಿ ಎರಡನೆಯ ಸಾರಿ ಅವನಿಗೆ, “ಯೋಹಾನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯೋ?” ಎಂದು ಕೇಳಲು, ಅವನು ಹೌದು ಕರ್ತನೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂದು ನೀನೇ ಬಲ್ಲೆ ಎಂದನು. ಆತನು ಅವನಿಗೆ “ನನ್ನ ಕುರಿಗಳನ್ನು ಪಾಲಿಸು” ಎಂದು ಹೇಳಿದನು. 17ಯೇಸು ಮೂರನೆಯ ಸಾರಿ, “ಯೋಹಾನನ ಮಗನಾದ ಸೀಮೋನನೇ ನೀನು ನನ್ನ ಮೇಲೆ ಮಮತೆ ಇಟ್ಟಿದ್ದಿಯೋ?” ಎಂದು ಕೇಳಿದನು, ಮೂರನೆಯ ಸಾರಿ ಆತನು, “ನನ್ನ ಮೇಲೆ ಮಮತೆ ಇಟ್ಟಿದ್ದೀಯೋ?” ಎಂದು ತನ್ನನ್ನು ಕೇಳಿದ್ದಕ್ಕೆ ಪೇತ್ರನು ದುಃಖಪಟ್ಟು, “ಕರ್ತನೇ, ನಿನಗೆ ಎಲ್ಲವೂ ತಿಳಿದಿದೆ. ನಾನು ನಿನ್ನ ಮೇಲೆ ಮಮತೆ ಇಟ್ಟೀದ್ದೇನೆಂದು ನಿನಗೆ ತಿಳಿದಿದೆ” ಎಂದನು. ಆಗ ಅವನಿಗೆ ಯೇಸು “ನನ್ನ ಕುರಿಗಳನ್ನು ಮೇಯಿಸು” ಎಂದನು. 18“ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ನೀನು ಯುವಕನಾಗಿದ್ದಾಗ ನೀನೇ ನಿನ್ನ ಉಡುಪನ್ನು ಧರಿಸಿಕೊಂಡು ಇಷ್ಟಬಂದ ಕಡೆಗೆ ತಿರುಗಾಡುತ್ತಿದ್ದೀ. ಆದರೆ ನೀನು ಮುದುಕನಾದಾಗ ನಿನ್ನ ಕೈಗಳನ್ನು ಚಾಚುವಿ, ಆಗ ಮತ್ತೊಬ್ಬನು ನಿನ್ನ ನಡುವನ್ನು ಕಟ್ಟಿ ನಿನಗೆ ಇಷ್ಟವಿಲ್ಲದ ಕಡೆಗೆ ನಿನ್ನನ್ನು ಹೊತ್ತುಕೊಂಡು ಹೋಗುವನು” ಎಂದು ಹೇಳಿದನು. 19ಅವನು ಎಂಥಾ ಮರಣದಿಂದ ದೇವರನ್ನು ಮಹಿಮೆಪಡಿಸುವನು ಎಂಬುದನ್ನು ಯೇಸು ಈ ಮಾತಿನಿಂದ ಸೂಚಿಸಿದನು. ಆತನು ಇದನ್ನು ಹೇಳಿ ಪೇತ್ರನಿಗೆ “ನನ್ನನ್ನು ಹಿಂಬಾಲಿಸು” ಎಂದು ಹೇಳಿದನು. 20ಪೇತ್ರನು ಹಿಂತಿರುಗಿ ನೋಡಿದಾಗ, ಯೇಸುವಿಗೆ ಪ್ರಿಯನಾಗಿದ್ದ ಶಿಷ್ಯನು ಹಿಂದೆ ಬರುವುದನ್ನು ಕಂಡನು. ಆ ಶಿಷ್ಯನು ಊಟದ ಸಮಯದಲ್ಲಿ ಯೇಸುವಿನ ಎದೆಗೆ ಒರಗಿಕೊಂಡು, “ಕರ್ತನೇ, ನಿನ್ನನ್ನು ಹಿಡಿದುಕೊಡುವವನು ಯಾರು?” ಎಂದು ಕೇಳಿದವನೇ. 21ಇವನನ್ನು ಪೇತ್ರನು ನೋಡಿ ಯೇಸುವಿಗೆ, “ಕರ್ತನೇ, ಇವನ ಬಗ್ಗೆ ಏನು ಹೇಳುತ್ತೀಯಾ?” ಎಂದು ಕೇಳಲು, 22ಯೇಸು ಅವನಿಗೆ “ನಾನು ಬರುವ ತನಕ ಇವನು ಉಳಿದಿರಬೇಕೆಂಬುದು ನನಗೆ ಮನಸ್ಸಾಗಿದ್ದರೆ ಅದರಿಂದ ನಿನಗೇನು? ನೀನು ನನ್ನನ್ನು ಹಿಂಬಾಲಿಸು” ಎಂದು ಹೇಳಿದನು. 23ಆದುದರಿಂದ ಆ ಶಿಷ್ಯನು ಸಾಯುವುದಿಲ್ಲವೆಂಬ ಮಾತು ಸಹೋದರರಲ್ಲಿ ಹಬ್ಬಿತು. ಆದರೆ ಅವನು ಸಾಯುವುದಿಲ್ಲವೆಂದು ಯೇಸು ಅವನಿಗೆ ಹೇಳಲಿಲ್ಲ. “ನಾನು ಬರುವ ತನಕ ಅವನು ಉಳಿದಿರಬೇಕೆಂದು ನನಗೆ ಮನಸ್ಸಿದ್ದರೆ ಅದು ನಿನಗೇನು?” ಎಂದು ಮಾತ್ರ ಹೇಳಿದನು. 24ಈ ವಿಷಯವಾಗಿ ಸಾಕ್ಷಿಕೊಟ್ಟು, ಇವುಗಳನ್ನು ಬರೆದ ಶಿಷ್ಯನು ಇವನೇ. ಇವನ ಸಾಕ್ಷಿಯು ಸತ್ಯವೆಂದು ನಾವು ಬಲ್ಲೆವು. 25ಇದಲ್ಲದೆ ಯೇಸುವು ಮಾಡಿದ ಇನ್ನೂ ಬೇರೆ ಅನೇಕ ಸಂಗತಿಗಳು ಸಹ ಇವೆ. ಅವುಗಳನ್ನೆಲ್ಲಾ ಒಂದೊಂದಾಗಿ ಬರೆಯುವುದಾದರೆ, ಆ ಪುಸ್ತಕಗಳು ಲೋಕವೇ ಹಿಡಿಸಲಾರದಷ್ಟಾಗುವುದು ಎಂದು ನಾನು ಭಾವಿಸುತ್ತೇನೆ.

ಪತ್ರಿಕೆ

ಗಲಾ 6:11–18

11ಇಗೋ ನೋಡಿರಿ, ಸ್ವಂತ ಕೈಯಿಂದ ಎಂಥಾ ದೊಡ್ಡ ಅಕ್ಷರಗಳಲ್ಲಿ ನಿಮಗೆ ಬರೆಯುತ್ತಾ ಇದ್ದೇನೆ. 12ದೈಹಿಕವಾಗಿ ಪ್ರಶಂಸೆಯನ್ನು ಹೊಂದಬೇಕೆಂದಿರುವವರು ಸುನ್ನತಿ ಮಾಡಿಸಿಕೊಳ್ಳಿರಿ ಎಂಬುದಾಗಿ ನಿಮ್ಮನ್ನು ಒತ್ತಾಯಿಸುತ್ತಾರೆ. ಏಕೆಂದರೆ ಕ್ರಿಸ್ತನ ಶಿಲುಬೆಯ ದೆಸೆಯಿಂದ ತಮಗೆ ಹಿಂಸೆಯಾಗಬಾರದೆಂಬುದೇ ಅವರ ಉದ್ದೇಶ. 13ಸುನ್ನತಿ ಮಾಡಿಸಿಕೊಂಡವರೇ ಧರ್ಮಶಾಸ್ತ್ರವನ್ನು ಕೈಕೊಂಡು ನಡೆಯುತ್ತಿಲ್ಲವಲ್ಲಾ. ಅವರು ನಿಮ್ಮ ಶರೀರದ ವಿಷಯದಲ್ಲಿ ಹೆಚ್ಚಳಪಡುವುದಕ್ಕಾಗಿ ನಿಮಗೆ ಸುನ್ನತಿಯಾಗಬೇಕೆಂದು ಅಪೇಕ್ಷಿಸುತ್ತಾರೆ. 14ನನಗಾದರೋ ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಿಲುಬೆಯ ವಿಷಯದಲ್ಲಿಯೇ ಹೊರತು ಬೇರೆ ಯಾವ ವಿಷಯದಲ್ಲಿಯೂ ಹೆಚ್ಚಳಪಡುವುದು ಬೇಕಾಗಿಲ್ಲ. ಆತನ ಮೂಲಕ ನಾನು ಲೋಕಕ್ಕೂ, ಲೋಕವು ನನಗಾಗಿಯೂ ಶಿಲುಬೆಗೆ ಹಾಕಿಕೊಂಡು ಸತ್ತಿತು. 15ಸುನ್ನತಿ ಮಾಡಿಸಿಕೊಳ್ಳುವುದೋ ಅಥವಾ ಮಾಡಿಸಿಕೊಳ್ಳದಿರುವುದೋ ಏನು ಅಲ್ಲ, ಆದರೆ ಹೊಸ ಸೃಷ್ಟಿಯಾಗುವುದೇ ಪ್ರಮುಖವಾದುದು. 16ಈ ನಿಯಮಗಳನ್ನು ಸರಿಯಾಗಿ ನಡೆಯುವವರೆಲ್ಲರಿಗೂ ಮತ್ತು ದೇವರ ಇಸ್ರಾಯೇಲ್ಯರಿಗೆ ಶಾಂತಿಯೂ, ಕರುಣೆಯೂ ಉಂಟಾಗಲಿ. 17ಇನ್ನು ಮೇಲೆ ಯಾರೂ ನನಗೆ ತೊಂದರೆಪಡಿಸಬಾರದು, ನನ್ನ ದೇಹದಲ್ಲಿ ಯೇಸುಕ್ರಿಸ್ತನ ಗುರುತುಗಳನ್ನು ಮುದ್ರಿಸಿಕೊಂಡಿದ್ದೇನೆ. 18ಸಹೋದರರೇ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮ ಆತ್ಮದೊಂದಿಗಿರಲಿ. ಆಮೆನ್.

ಸುವಾರ್ತೆ

ಲೂಕ 8:5–15

5“ಬಿತ್ತುವವನು ಬೀಜವನ್ನು ಬಿತ್ತುವುದಕ್ಕೆ ಹೊರಟನು. ಅವನು ಬಿತ್ತುವಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದು ತುಳಿಯಲ್ಪಟ್ಟವು, ಆಕಾಶದಲ್ಲಿ ಹಾರಾಡುವ ಹಕ್ಕಿಗಳು ಅವುಗಳನ್ನು ತಿಂದುಬಿಟ್ಟವು. 6ಬೇರೆ ಕೆಲವು ಬೀಜಗಳು ಬಂಡೆಯ ಮೇಲೆ ಬಿದ್ದವು. ಅವು ಮೊಳೆತು ಬಂದರೂ ತೇವವಿಲ್ಲದ ಕಾರಣ ಒಣಗಿಹೋದವು. 7ಮತ್ತೆ ಕೆಲವು ಬೀಜಗಳು ಮುಳ್ಳುಪೊದೆಗಳೊಳಗೆ ಬಿದ್ದವು. ಮುಳ್ಳುಗಳು ಅವುಗಳೊಂದಿಗೆ ಬೆಳೆದು ಅವುಗಳನ್ನು ಅದುಮಿಬಿಟ್ಟವು. 8ಇನ್ನು ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದು, ಮೊಳೆತು, ನೂರರಷ್ಟು ಫಲವನ್ನು ಕೊಟ್ಟವು.” ಈ ಮಾತುಗಳನ್ನು ಹೇಳಿ ಆತನು, “ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ” ಎಂದು ಕೂಗಿ ಹೇಳಿದನು. 9ಯೇಸುವಿನ ಶಿಷ್ಯರು ಈ ಸಾಮ್ಯದ ಅರ್ಥವೇನೆಂದು ಆತನನ್ನು ಕೇಳಿದಾಗ, 10ಆತನು, “ದೇವರ ರಾಜ್ಯದ ಗುಟ್ಟುಗಳನ್ನು ತಿಳಿಯುವ ವರವು ನಿಮಗೆ ಕೊಡಲಾಗಿದೆ, ಉಳಿದವರಿಗೆ ‘ಕಣ್ಣಿದ್ದರೂ ನೋಡದಂತೆಯೂ, ಕೇಳಿಸಿಕೊಂಡರೂ ಗ್ರಹಿಸದಂತೆಯೂ’ ಸಾಮ್ಯರೂಪವಾಗಿ ಹೇಳಲಾಗುತ್ತದೆ. 11ಈ ಸಾಮ್ಯದ ಅರ್ಥವೇನಂದರೆ, ಆ ಬೀಜವೆಂದರೆ ದೇವರ ವಾಕ್ಯ. 12ಕೆಲವರು ವಾಕ್ಯವನ್ನು ಕೇಳಿದ ಕೂಡಲೆ ಸೈತಾನನು ಬಂದು ಅವರು ನಂಬಿ ರಕ್ಷಣೆ ಹೊಂದಬಾರದೆಂದು ವಾಕ್ಯವನ್ನು ಅವರ ಹೃದಯದಿಂದ ತೆಗೆದುಬಿಡುತ್ತಾನೆ. ಇವರೇ ದಾರಿಯ ಮಗ್ಗುಲಲ್ಲಿ ಬಿದ್ದಿರುವ ಬೀಜಗಳು. 13ಕೆಲವರು ವಾಕ್ಯವನ್ನು ಕೇಳಿದಾಗಲೇ ಅದನ್ನು ಸಂತೋಷದಿಂದ ಅಂಗೀಕರಿಸುತ್ತಾರೆ; ಇವರಿಗೆ ಬೇರಿಲ್ಲದ ಕಾರಣ ಸ್ವಲ್ಪಕಾಲ ಮಾತ್ರವೇ ನಂಬಿಕೊಂಡಿದ್ದು ಶೋಧನೆಯ ಕಾಲದಲ್ಲಿ ಬಿದ್ದು ಹೋಗುತ್ತಾರೆ. ಇವರೇ ಬಂಡೆಯ ಮೇಲೆ ಬೀಳಲ್ಪಟ್ಟ ಬೀಜಗಳು. 14ಇನ್ನು ಕೆಲವರು ವಾಕ್ಯವನ್ನು ಕೇಳಿದ ಮೇಲೆ ಬರಬರುತ್ತಾ ಈ ಜೀವನದಲ್ಲಿ ಆಗುವ ಚಿಂತೆ, ಐಶ್ವರ್ಯ ಭೋಗಗಳಿಂದ ಅಡಗಿಸಲ್ಪಟ್ಟು ಫಲವನ್ನು ಕೊಡಲಾರದವರು, ಮುಳ್ಳುಗಿಡಗಳಲ್ಲಿ ಬಿದ್ದ ಬೀಜವಾಗಿರುವವರು. 15ಮತ್ತೆ ಕೆಲವರು ವಾಕ್ಯವನ್ನು ಕೇಳಿ ಸುಗುಣವುಳ್ಳ ತಮ್ಮ ಒಳ್ಳೆಯ ಹೃದಯದಲ್ಲಿ ಅದನ್ನು ಸಂಗ್ರಹಿಸಿ ಇಟ್ಟುಕೊಂಡು ತಾಳ್ಮೆಯಿಂದ ಫಲವನ್ನು ಕೊಡುತ್ತಾರೆ. ಇವರೇ ಒಳ್ಳೆಯ ನೆಲದಲ್ಲಿ ಬಿದ್ದ ಬೀಜಗಳು.

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 19 ಅಕ್ಟೋಬರ್ ಎಂದರೆ ನಾಗರಿಕ ಪಂಚಾಂಗದ 1 ನವೆಂಬರ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು