Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಅರಸುಗಳು ಮತ್ತು ಪೂರ್ವಕಾಲವೃತ್ತಾಂತ › ಸೌಲ ಮತ್ತು ದಾವೀದ

ಪಕ್ಕಪಕ್ಕದಲ್ಲಿ ಅರಸುಗಳು ಮತ್ತು ಪೂರ್ವಕಾಲವೃತ್ತಾಂತ · ಸೌಲ ಮತ್ತು ದಾವೀದ

ದಾವೀದನ ಜನಗಣತಿ

2 ಸಮು 24:1–25 · 1 ಪೂರ್ವ 21:1–27

2 ಸಮುವೇಲನು

2 ಸಮು 24:1–25

1ಯೆಹೋವನು ಪುನಃ ಇಸ್ರಾಯೇಲರ ಮೇಲೆ ಕೋಪಗೊಂಡು ದಾವೀದನನ್ನು ಇಸ್ರಾಯೇಲ್ ಮತ್ತು ಯೆಹೂದ ಕುಲಗಳವರ ಜನಗಣತಿ ಮಾಡುವುದಕ್ಕೆ ಪ್ರೇರೇಪಿಸಿದನು.

2ಅರಸನು ತನ್ನ ಹತ್ತಿರದಲ್ಲಿದ್ದ ಸೇನಾಧಿಪತಿಯಾದ ಯೋವಾಬನಿಗೆ, “ಜನಸಂಖ್ಯೆ ಗೊತ್ತಾಗುವ ಹಾಗೆ ನೀನು ದಾನ್ ಊರಿನಿಂದ ಬೇರ್ಷೆಬದ ವರೆಗೆ ಸಂಚರಿಸಿ ಇಸ್ರಾಯೇಲ್ ಕುಲಗಳ ಜನಗಣತಿ ಮಾಡಿಕೊಂಡು ಬಾ” ಎಂದು ಅವನಿಗೆ ಆಜ್ಞಾಪಿಸಿದನು.

3ಆಗ ಯೋವಾಬನು ಅರಸನಿಗೆ, “ನನ್ನ ಒಡೆಯನಾದ ನಿನ್ನ ಆಯುಷ್ಕಾಲದಲ್ಲೇ ದೇವರಾದ ಯೆಹೋವನು ನಿನ್ನ ಪ್ರಜೆಯನ್ನು ಈಗ ಇರುವುದಕ್ಕಿಂತ ನೂರರಷ್ಟು ಹೆಚ್ಚಿಸಲಿ. ನನ್ನ ಒಡೆಯನಾದ ಅರಸನು ಈ ಕಾರ್ಯಕ್ಕೆ ಮನಸ್ಸು ಮಾಡಿದ್ದೇಕೆ?” ಅಂದನು.

4ಆದರೆ ಅರಸನು ಯೋವಾಬನಿಗೂ ಇತರ ಸೇನಾಧಿಪತಿಗಳಿಗೂ ಕಿವಿಗೊಡದೆ, ತನ್ನ ಮಾತನ್ನೇ ಸಾಧಿಸಿದ್ದರಿಂದ ಅವರು ಇಸ್ರಾಯೇಲರನ್ನು ಲೆಕ್ಕಿಸುವುದಕ್ಕಾಗಿ ಅರಸನ ಸನ್ನಿಧಿಯಿಂದ ಹೊರಟು ಹೋದರು.

5ಅವರು ಯೊರ್ದನ್ ನದಿಯನ್ನು ದಾಟಿ ಗಾದ್ ತಗ್ಗಿನಲ್ಲಿರುವ ಪಟ್ಟಣದ ಬಲಪಾರ್ಶ್ವದಲ್ಲಿರುವ ಅರೋಯೇರಿನಿಂದ ಯಗ್ಜೇರಿಗೂ,

6ಅಲ್ಲಿಂದ ಗಿಲ್ಯಾದ್ ಪ್ರಾಂತ್ಯ, ತಖ್ತೀಮ್ ಹೂಜೀ ಪ್ರದೇಶ ಇವುಗಳ ಮೇಲೆ ಯಾನಿನ ದಾನ್ ಎಂಬಲ್ಲಿಗೂ ಬಂದರು.

7ಅಲ್ಲಿಂದ ಚೀದೋನ್ ತೂರ್ ಕೋಟೆ, ಹಿವ್ವಿಯರ ಮತ್ತು ಕಾನಾನ್ಯರ ಪಟ್ಟಣಗಳು, ಇವುಗಳ ಮೇಲೆ ಯೆಹೂದ ಪ್ರಾಂತ್ಯದ ದಕ್ಷಿಣದಿಕ್ಕಿನಲ್ಲಿರುವ ಬೇರ್ಷೆಬಕ್ಕೆ ಬಂದರು.

8ಹೀಗೆ ಒಂಭತ್ತು ತಿಂಗಳು ಇಪ್ಪತ್ತು ದಿನಗಳಲ್ಲಿ ದೇಶವನ್ನೆಲ್ಲಾ ಸಂಚರಿಸಿ ಯೆರೂಸಲೇಮಿಗೆ ಹಿಂದಿರುಗಿ ಬಂದರು.

9ಯೋವಾಬನು ಅರಸನಿಗೆ ಒಪ್ಪಿಸಿದ ಜನಗಣತಿ ಸಂಖ್ಯೆಯು - ಇಸ್ರಾಯೇಲರಲ್ಲಿ ಯುದ್ಧಕ್ಕೆ ಹೋಗತಕ್ಕ ಸೈನಿಕರು ಎಂಟು ಲಕ್ಷ ಮತ್ತು ಯೆಹೂದ್ಯರಲ್ಲಿ ಐದು ಲಕ್ಷ.

10ಜನಗಣತಿ ಮಾಡಿಸಿದ ನಂತರ ದಾವೀದನಿಗೆ ಮನಸ್ಸಾಕ್ಷಿಯು ಚುಚ್ಚತೊಡಗಿತು. ಆದುದರಿಂದ ಅವನು ಯೆಹೋವನನ್ನು, “ಯೆಹೋವನೇ, ನಾನು ಬುದ್ಧಿಹೀನಕಾರ್ಯವನ್ನು ಮಾಡಿ ಪಾಪಿಯಾದೆನು. ದಯವಿಟ್ಟು ನಿನ್ನ ಸೇವಕನ ಅಪರಾಧವನ್ನು ಕ್ಷಮಿಸು” ಎಂದು ಪ್ರಾರ್ಥಿಸಿದನು.

11ಅವನು ಮರುದಿನ ಬೆಳಿಗ್ಗೆ ಏಳುವಷ್ಟರಲ್ಲಿ ಅವನ ದರ್ಶಿಯಾದ ಗಾದ್ ಪ್ರವಾದಿಗೆ ಯೆಹೋವನು ದರ್ಶನದಲ್ಲಿ,

12“ನೀನು ದಾವೀದನ ಬಳಿ ಹೋಗಿ ಅವನಿಗೆ, ‘ನಾನು ಮೂರು ವಿಧವಾದ ಶಿಕ್ಷೆಗಳನ್ನು ನಿನ್ನ ಮುಂದೆ ಇಟ್ಟಿದ್ದೇನೆ. ಅವುಗಳಲ್ಲಿ ಯಾವುದನ್ನು ನಿನ್ನ ಮೇಲೆ ಬರಮಾಡಬೇಕೋ ಆರಿಸಿಕೋ ಎಂದು ಯೆಹೋವನು ಅನ್ನುತ್ತಾನೆ’ ಎಂಬುದಾಗಿ ಹೇಳು” ಎಂದು ಆಜ್ಞಾಪಿಸಿದನು.

13ಆಗ ಗಾದನು ದಾವೀದನ ಬಳಿಗೆ ಹೋಗಿ, “ನಿನ್ನ ದೇಶದಲ್ಲಿ ಏಳು ವರ್ಷಗಳು ಬರವು ಉಂಟಾಗಬೇಕೋ? ಇಲ್ಲವೆ ನಿನ್ನ ಶತ್ರುಗಳು ನಿನ್ನನ್ನು ಸೋಲಿಸಿ ಮೂರು ತಿಂಗಳಗಳವರೆಗೆ ಓಡಿಸಿಬಿಡಬೇಕೋ? ಇಲ್ಲವೆ ನಿನ್ನ ದೇಶದಲ್ಲಿ ಮೂರು ದಿನಗಳವರೆಗೂ ಘೋರವ್ಯಾಧಿ ಬರಬೇಕೋ? ನನ್ನನ್ನು ಕಳುಹಿಸಿದವನಿಗೆ ಯಾವ ಉತ್ತರವನ್ನು ನಿನ್ನಿಂದ ಪಡೆದು ತಿಳಿಸಲಿ? ಆಲೋಚಿಸಿ ಹೇಳು” ಎಂದನು.

14ಅದಕ್ಕೆ ದಾವೀದನು ಗಾದನಿಗೆ, “ನಾನು ಬಲು ಇಕ್ಕಟ್ಟಿನಲ್ಲಿದ್ದೇನೆ. ಯೆಹೋವನ ಕೈಯಲ್ಲಿ ಬೀಳುತ್ತೇನೆ, ಆತನು ಕೃಪಾಪೂರ್ಣನು ನಾನು ಮನುಷ್ಯರ ಕೈಯಲ್ಲಿ ಬೀಳಲೊಲ್ಲೆನು” ಎಂದು ಹೇಳಿದನು.

15ಆಗ ಯೆಹೋವನು ಇಸ್ರಾಯೇಲರ ಮೇಲೆ ವ್ಯಾಧಿಯನ್ನು ಬರಮಾಡಿದನು. ಅದು ಹೊತ್ತಾರೆಯಿಂದ ನೇಮಕವಾದ ಹೊತ್ತಿನ ವರೆಗೂ ಇತ್ತು. ದಾನಿನಿಂದ ಬೇರ್ಷೆಬದ ವರೆಗೆ ವಾಸವಾಗಿರುವ ಇಸ್ರಾಯೇಲರಲ್ಲಿ ಎಪ್ಪತ್ತು ಸಾವಿರ ಜನರು ಸತ್ತುಹೋದರು.

16ದೇವದೂತನು ಯೆರೂಸಲೇಮನ್ನೂ ಸಂಹರಿಸುವುದಕ್ಕೆ ಕೈಚಾಚಿದಾಗ ಯೆಹೋವನು ಆ ಕೇಡಿನ ವಿಷಯದಲ್ಲಿ ಪಶ್ಚಾತ್ತಾಪಪಟ್ಟು ಸಂಹಾರಕ ದೂತನಿಗೆ, “ಈಗ ಸಾಕು ನಿನ್ನ ಕೈಯನ್ನು ಹಿಂದೆಗೆ” ಎಂದು ಆಜ್ಞಾಪಿಸಿದನು. ಆಗ ಆ ದೂತನು ಯೆಬೂಸಿಯನಾದ ಅರೌನನ ಕಣದಲ್ಲಿದ್ದನು.

17ದಾವೀದನು ಜನಸಂಹಾರಕ ದೂತನನ್ನು ಕಂಡಾಗ ಯೆಹೋವನಿಗೆ, “ಮೂರ್ಖತನದಿಂದ ಪಾಪಮಾಡಿದವನು ನಾನು, ಕುರಿಗಳಂತಿರುವ ಈ ಜನರು ಏನು ಮಾಡಿದ್ದಾರೆ? ನಿನ್ನ ಕೈ ನನಗೂ ನನ್ನ ಮನೆಯವರಿಗೂ ವಿರೋಧವಾಗಿರಲಿ” ಎಂದು ಬೇಡಿಕೊಂಡನು.

18ಅದೇ ದಿನದಲ್ಲಿ ಗಾದನು ದಾವೀದನ ಬಳಿಗೆ ಬಂದು ಅವನಿಗೆ, “ನೀನು ಹೋಗಿ ಯೆಬೂಸಿಯನಾದ ಅರೌನನ ಕಣದಲ್ಲಿ ಯೆಹೋವನಿಗೋಸ್ಕರ ಒಂದು ಯಜ್ಞವೇದಿಯನ್ನು ಕಟ್ಟಿಸು” ಎಂದು ಹೇಳಿದನು.

19ದಾವೀದನು ಗಾದನ ಮುಖಾಂತರವಾಗಿ ತನಗಾದ ಯೆಹೋವನ ಅಪ್ಪಣೆಯಂತೆ ಹೊರಟನು.

20ದಾವೀದನೂ ಅವನ ಸೇವಕರೂ ತನ್ನ ಬಳಿಗೆ ಬರುವುದನ್ನು ಅರೌನನು ಕಂಡು ಅವರ ಮುಂದೆ ಹೋಗಿ ಅರಸನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು.

21ಅವನು, “ನನ್ನ ಒಡೆಯನಾದ ಅರಸನು ತನ್ನ ಸೇವಕನ ಬಳಿಗೆ ಬರುವುದಕ್ಕೆ ಕಾರಣವೇನು?” ಎಂದು ಕೇಳಿದನು. ದಾವೀದನು ಅವನಿಗೆ, “ವ್ಯಾಧಿಯು ಜನರನ್ನು ಬಿಟ್ಟು ಹೋಗುವಂತೆ ನಾನು ನಿನ್ನ ಕಣವನ್ನು ಕೊಂಡುಕೊಂಡು ಅದರಲ್ಲಿ ಯೆಹೋವನಿಗೋಸ್ಕರ ಒಂದು ಯಜ್ಞವೇದಿಯನ್ನು ಕಟ್ಟುವುದಕ್ಕೆ ಬಂದಿದ್ದೇನೆ” ಎಂದು ಉತ್ತರಕೊಟ್ಟನು.

22ಆಗ ಅರೌನನು ದಾವೀದನಿಗೆ, “ನನ್ನ ಒಡೆಯನಾದ ಅರಸನು ತನಗೆ ಇಷ್ಟವಾದದ್ದನ್ನು ತೆಗೆದುಕೊಂಡು ಅರ್ಪಿಸೋಣವಾಗಲಿ, ಇಲ್ಲಿ ಯಜ್ಞಕ್ಕೆ ಹೋರಿಗಳೂ, ಸೌದೆಗೆ ನೊಗ ಮೊದಲಾದ ಎತ್ತಿನ ಸಾಮಾನುಗಳೂ ಇರುತ್ತವೆ.

23ಇವುಗಳನ್ನೆಲ್ಲಾ ಅರಸನ ಸೇವಕನಾದ ನಾನು ಅರಸನಿಗೆ ಕೊಡುತ್ತೇನೆ. ನಿನ್ನ ದೇವರಾದ ಯೆಹೋವನು ನಿನಗೆ ಪ್ರಸನ್ನನಾಗಲಿ” ಎಂದು ಹೇಳಿದನು.

24ಅರಸನು ಅರೌನನಿಗೆ, “ಹಾಗಲ್ಲ, ನಾನು ಅವುಗಳನ್ನು ನಿನ್ನಿಂದ ಕ್ರಯಕ್ಕೆ ತೆಗೆದುಕೊಳ್ಳುತ್ತೇನೆ. ನನ್ನ ದೇವರಾದ ಯೆಹೋವನಿಗೆ ಉಚಿತವಾಗಿ ಸಿಕ್ಕಿದ್ದನ್ನು ಯಜ್ಞವಾಗಿ ಅರ್ಪಿಸಲಾರೆ” ಎಂದು ಹೇಳಿ ಆ ಕಣವನ್ನೂ ಮತ್ತು ಹೋರಿಗಳನ್ನೂ ಐವತ್ತು ಶೆಕಲ್ ಬೆಳ್ಳಿಗೆ ಕೊಂಡುಕೊಂಡನು.

25ಅಲ್ಲಿ ಅವನು ಯೆಹೋವನಿಗೋಸ್ಕರ ಯಜ್ಞವೇದಿಯನ್ನು ಕಟ್ಟಿಸಿ, ಅದರ ಮೇಲೆ ಆತನಿಗೆ ಸರ್ವಾಂಗಹೋಮಗಳನ್ನೂ, ಸಮಾಧಾನಯಜ್ಞಗಳನ್ನೂ ಅರ್ಪಿಸಿದನು. ಹೀಗೆ ದೇಶದ ಮೇಲಿದ್ದ ಯೆಹೋವನ ಕೋಪವು ಶಾಂತವಾಯಿತು. ಇಸ್ರಾಯೇಲ್ಯರಲ್ಲಿದ್ದ ವ್ಯಾಧಿಯು ಗುಣವಾಯಿತು.

1 ಪೂರ್ವಕಾಲವೃತ್ತಾಂತ

1 ಪೂರ್ವ 21:1–27

1ಸೈತಾನನು ಇಸ್ರಾಯೇಲರಿಗೆ ವಿರುದ್ಧ ಎದ್ದು, ಇಸ್ರಾಯೇಲರ ಜನಗಣತಿ ಮಾಡುವುದಕ್ಕೆ ದಾವೀದನನ್ನು ಪ್ರೇರೇಪಿಸಿದನು.

2ದಾವೀದನು ಯೋವಾಬನನ್ನೂ ಮತ್ತು ಜನಾಧಿಪತಿಗಳನ್ನೂ ಕರೆದು, “ನನಗೆ ಜನರ ಲೆಕ್ಕ ಗೊತ್ತಾಗುವ ಹಾಗೆ ನೀವು ಬೇರ್ಷೆಬದಿಂದ ದಾನ್ ಊರಿನವರೆಗೂ ಸಂಚರಿಸಿ, ಇಸ್ರಾಯೇಲರನ್ನು ಲೆಕ್ಕ ಮಾಡಿಕೊಂಡು ಬನ್ನಿರಿ” ಎಂದು ಆಜ್ಞಾಪಿಸಿದನು.

3ಆಗ ಯೋವಾಬನು, “ನನ್ನ ಒಡೆಯನಾದ ಅರಸನೇ, ಯೆಹೋವನು ತನ್ನ ಪ್ರಜೆಗಳನ್ನು ನೂರರಷ್ಟು ಹೆಚ್ಚಿಸಲಿ. ಅವರೆಲ್ಲರೂ ನನ್ನ ಒಡೆಯನ ದಾಸರಷ್ಟೆ. ಒಡೆಯನು ಇಂಥದ್ದನ್ನು ಅಪೇಕ್ಷಿಸುವುದೇನು? ಇಸ್ರಾಯೇಲರನ್ನು ಅಪರಾಧಕ್ಕೆ ಗುರಿಮಾಡುವುದೇಕೆ” ಎಂದನು.

4ಆದರೆ ಅರಸನು ಯೋವಾಬನಿಗೆ ಕಿವಿಗೊಡದೆ ತನ್ನ ಮಾತನ್ನೇ ನಡೆಸಿದ್ದರಿಂದ ಅವನು ಹೊರಟುಹೋಗಿ ಇಸ್ರಾಯೇಲರ ಎಲ್ಲಾ ಪ್ರಾಂತ್ಯಗಳಲ್ಲಿ ಸಂಚರಿಸಿ ಯೆರೂಸಲೇಮಿಗೆ ಹಿಂದಿರುಗಿದನು.

5ಯೋವಾಬನು ದಾವೀದನಿಗೆ ಒಪ್ಪಿಸಿದ ಜನಗಣತಿಯ ಸಂಖ್ಯೆಯು ಇಸ್ರಾಯೇಲರಲ್ಲಿ ಯುದ್ಧಕ್ಕೆ ಹೋಗತಕ್ಕ ಸೈನಿಕರು ಹನ್ನೊಂದು ಲಕ್ಷ ಮತ್ತು ಯೆಹೂದ್ಯರಲ್ಲಿ ನಾಲ್ಕು ಲಕ್ಷದ ಎಪ್ಪತ್ತು ಸಾವಿರ.

6ಅರಸನ ಅಪ್ಪಣೆಯು ಯೋವಾಬನಿಗೆ ಅಸಹ್ಯವಾಗಿದ್ದುದರಿಂದ ಅವನು ಲೇವಿ ಮತ್ತು ಬೆನ್ಯಾಮೀನ್ ಕುಲಗಳವರ ಜನಗಣತಿಯನ್ನು ಮಾಡಲಿಲ್ಲ.

7ಜನಗಣತಿ ಮಾಡಿದ್ದು ದೇವರಿಗೆ ಕೆಟ್ಟದ್ದೆಂದು ಕಂಡದ್ದರಿಂದ ಆತನು ಇಸ್ರಾಯೇಲರನ್ನು ಬಾಧಿಸಿದನು.

8ಆಗ ದಾವೀದನು, “ನಾನು ಬುದ್ಧಿಹೀನ ಕಾರ್ಯವನ್ನು ಮಾಡಿ ಪಾಪಿಯಾಗಿದ್ದೇನೆ. ದಯವಿಟ್ಟು ನಿನ್ನ ಸೇವಕನ ಅಪರಾಧವನ್ನು ಕ್ಷಮಿಸು” ಎಂದು ದೇವರನ್ನು ಪ್ರಾರ್ಥಿಸಿದನು.

9ಯೆಹೋವನು ದಾವೀದನ ದರ್ಶಿಯಾದ ಗಾದನಿಗೆ ಹೇಳಿದ್ದೇನೆಂದರೆ,

10ಯೆಹೋವನು ಇಂತೆನ್ನುತ್ತಾನೆ, “ನಾನು ಮೂರು ವಿಧವಾದ ಶಿಕ್ಷೆಯನ್ನು ನಿನ್ನ ಮುಂದೆ ಇಡುತ್ತೇನೆ. ಅವುಗಳಲ್ಲಿ ಯಾವುದನ್ನು ನಿನ್ನ ಮೇಲೆ ಬರಮಾಡಬೇಕೋ ಆರಿಸಿಕೋ ಎಂಬುದಾಗಿ ದಾವೀದನಿಗೆ ಹೇಳು” ಎಂದನು.

11ಆಗ ಗಾದನು ದಾವೀದನ ಬಳಿಗೆ ಹೋಗಿ ಅವನಿಗೆ, “ಯೆಹೋವನು ಹೇಳುವುದೇನೆಂದರೆ,

12‘ಮೂರು ವರ್ಷಗಳ ವರೆಗೆ ಬರಗಾಲ ಉಂಟಾಗಬೇಕೋ, ಇಲ್ಲವೆ ನೀನು ಮೂರು ತಿಂಗಳು ನಿನ್ನ ಶತ್ರುಗಳ ಚಿತ್ರಹಿಂಸೆಗೆ ಬಲಿಯಾಗುವುದು ಬೇಕೋ, ಇಲ್ಲವೆ ಇಸ್ರಾಯೇಲರ ಸಮಸ್ತ ಪ್ರಾಂತ್ಯಗಳಲ್ಲಿ ಯೆಹೋವನು ಕಳುಹಿಸಿದ ಸಂಹಾರದೂತನಿಂದ ಉಂಟಾಗುವ ಮೂರು ದಿನಗಳ ಘೋರವ್ಯಾಧಿಯ ರೂಪವಾದ ಯೆಹೋವನ ಶಿಕ್ಷೆ ಬೇಕೋ, ಈ ಮೂರರಲ್ಲಿ ಒಂದನ್ನು ಆರಿಸಿಕೊ’ ಎಂಬುದೇ. ನನ್ನನ್ನು ಕಳುಹಿಸಿದವನಿಗೆ ಯಾವ ಉತ್ತರವನ್ನು ತೆಗೆದುಕೊಂಡು ಹೋಗಬೇಕು ಆಲೋಚಿಸಿ ಹೇಳು” ಎಂದು ಹೇಳಿದನು.

13ಅದಕ್ಕೆ ದಾವೀದನು ಗಾದನಿಗೆ, “ನಾನು ಬಲು ಇಕ್ಕಟ್ಟಿನಲ್ಲಿರುತ್ತೇನೆ. ಮನುಷ್ಯರ ಕೈಯಲ್ಲಿ ಬೀಳುವುದಕ್ಕಿಂತ ಯೆಹೋವನ ಹಸ್ತದಲ್ಲಿ ಬೀಳುವುದು ಮೇಲು. ಆತನು ಕೃಪಾಪೂರ್ಣನು” ಎಂದು ಹೇಳಿದನು.

14ಆಗ ಯೆಹೋವನು ಇಸ್ರಾಯೇಲರ ಮೇಲೆ ವ್ಯಾಧಿಯನ್ನು ಬರಮಾಡಿದನು. ಅವರಲ್ಲಿ ಎಪ್ಪತ್ತು ಸಾವಿರ ಜನರು ಸತ್ತರು.

15ದೇವರು ಯೆರೂಸಲೇಮನ್ನು ನಾಶಪಡಿಸುವುದಕ್ಕೆ ದೂತರನ್ನು ಕಳುಹಿಸಿದನು. ಆದರೆ ಆ ದೂತನು ನಾಶಪಡಿಸುವುದಕ್ಕಿದ್ದಾಗ ಯೆಹೋವನು ಅದನ್ನು ಕಂಡು ಆ ಕೇಡಿನ ವಿಷಯದಲ್ಲಿ ಪಶ್ಚಾತ್ತಾಪಪಟ್ಟು ಸಂಹಾರ ದೂತನಿಗೆ, “ಸಾಕು ನಿನ್ನ ಕೈಯನ್ನು ಹಿಂದೆಗೆ” ಎಂದು ಆಜ್ಞಾಪಿಸಿದನು. ಆಗ ಯೆಹೋವನ ದೂತನು ಯೆಬೂಸಿಯನಾದ ಒರ್ನಾನನ ಕಣದಲ್ಲಿ ನಿಂತನು.

16ದಾವೀದನು ಕಣ್ಣೆತ್ತಿ ನೋಡಿ ಯೆಹೋವನ ದೂತನು ಭೂಮ್ಯಾಕಾಶಗಳ ನಡುವೆ ನಿಂತಿರುವುದನ್ನೂ, ಚಾಚಿದ ಕೈಯಲ್ಲಿ ಯೆರೂಸಲೇಮಿಗೆ ವಿರುದ್ಧವಾಗಿ ಹಿರಿದ ಕತ್ತಿಯಿರುವುದನ್ನೂ ಕಂಡಾಗ ಅವನೂ, ಹಿರಿಯರೂ ಗೋಣಿತಟ್ಟನ್ನು ಹೊದ್ದುಕೊಂಡು ಬೋರಲು ಬಿದ್ದರು.

17ಮತ್ತು ದಾವೀದನು ದೇವರಿಗೆ, “ಜನರನ್ನು ಲೆಕ್ಕಿಸಬೇಕೆಂದು ಆಜ್ಞಾಪಿಸಿದವನು ನಾನಲ್ಲವೋ. ಮಹಾಪಾಪಮಾಡಿದವನು ನಾನೇ. ಕುರಿಗಳಂತಿರುವ ಈ ಜನರು ಏನು ಮಾಡಿದ್ದಾರೆ? ಯೆಹೋವನೇ, ನನ್ನ ದೇವರೇ, ನಿನ್ನ ಹಸ್ತವು ನಿನ್ನ ಜನರನ್ನು ಬಾಧಿಸುವುದಕ್ಕೆ ಅವರಿಗೆ ವಿರುದ್ಧವಾಗಿರದೆ ನನಗೂ ನನ್ನ ಮನೆಯವರಿಗೂ ವಿರುದ್ಧವಾಗಿರಲಿ” ಎಂದು ಬೇಡಿಕೊಂಡನು.

18ಆಗ ಯೆಹೋವನ ದೂತನು ಗಾದನಿಗೆ, “ಯೆಬೂಸಿಯನಾದ ಒರ್ನಾನನ ಕಣದಲ್ಲಿ ಯೆಹೋವನಿಗೋಸ್ಕರ ಒಂದು ಯಜ್ಞವೇದಿಯನ್ನು ಕಟ್ಟಿಸುವುದಕ್ಕೆ ಹೋಗಬೇಕು ಎಂದು ದಾವೀದನಿಗೆ ಹೇಳು” ಎಂದು ಆಜ್ಞಾಪಿಸಿದನು.

19ದಾವೀದನು ಗಾದನ ಮುಖಾಂತರವಾಗಿ ತನಗಾದ ಯೆಹೋವನ ಅಪ್ಪಣೆಯಂತೆ ಹೊರಟನು.

20ಅಷ್ಟರಲ್ಲಿ ಗೋದಿಯನ್ನು ತುಳಿಸುತ್ತಿದ್ದ ಒರ್ನಾನನು ತಿರುಗಿಕೊಂಡು ದೂತನನ್ನು ನೋಡಿದ್ದನು. ಅವನ ಜೊತೆಯಲ್ಲಿದ್ದ ಅವನ ನಾಲ್ಕು ಮಕ್ಕಳು ಅಡಗಿಕೊಂಡಿದ್ದರು.

21ದಾವೀದನು ತನ್ನ ಬಳಿಗೆ ಬರುವುದನ್ನು ಒರ್ನಾನನು ಕಂಡು ಕಣವನ್ನು ಬಿಟ್ಟು ಹೋಗಿ ಅವನಿಗೆ ಅಡ್ಡ ಬಿದ್ದನು.

22ದಾವೀದನು ಅವನಿಗೆ, “ನಿನ್ನ ಕಣವನ್ನೂ ಮತ್ತು ಭೂಮಿಯನ್ನು ನನಗೆ ಕೊಡು, ವ್ಯಾಧಿಯು ಜನರನ್ನು ಬಿಟ್ಟು ಹೋಗುವಂತೆ ನಾನು ಅದರಲ್ಲಿ ಯೆಹೋವನಿಗೋಸ್ಕರ ಒಂದು ಯಜ್ಞವೇದಿಯನ್ನು ಕಟ್ಟಿಸುತ್ತೇನೆ. ಪೂರ್ಣಕ್ರಯ ತೆಗೆದುಕೊಂಡು ಅದನ್ನು ಕೊಡು” ಎಂದು ಹೇಳಿದನು.

23ಆಗ ಒರ್ನಾನನು ದಾವೀದನಿಗೆ, “ನನ್ನ ಒಡೆಯನಾದ ಅರಸನು ತನಗೆ ಇಷ್ಟವಾದದ್ದನ್ನು ತೆಗೆದುಕೊಂಡು ಯಜ್ಞಮಾಡೋಣವಾಗಲಿ. ಇಲ್ಲಿ ಯಜ್ಞಕ್ಕೆ ಹೋರಿಗಳೂ, ಸೌದೆಗೆ ಹಂತೀಕುಂಟೆಗಳೂ, ನೈವೇದ್ಯಕ್ಕೋಸ್ಕರ ಗೋದಿಯೂ ಇರುತ್ತವೆ. ಇವೆಲ್ಲವನ್ನೂ ಕೊಡುತ್ತೇನೆ” ಎಂದು ಹೇಳಿದನು.

24ಅರಸನಾದ ದಾವೀದನು ಒರ್ನಾನನಿಗೆ “ಹಾಗಲ್ಲ ನಾನು ನಿನ್ನಿಂದ ಪೂರ್ಣ ಕ್ರಯಕ್ಕೆ ತೆಗೆದುಕೊಳ್ಳುತ್ತೇನೆ ನಿನಗೆ ಸೇರಿದ್ದನ್ನು ಕ್ರಯವಿಲ್ಲದೆ ತೆಗೆದುಕೊಂಡು ಯೆಹೋವನಿಗೆ ಯಜ್ಞವಾಗಿ ಅರ್ಪಿಸುವುದಿಲ್ಲ” ಎಂದು ಹೇಳಿದನು.

25ದಾವೀದನು ಆ ಭೂಮಿಗೋಸ್ಕರ ಅವನಿಗೆ ಆರುನೂರು ಶೆಕಲ್ ಬಂಗಾರವನ್ನು ಕೊಟ್ಟನು.

26ಅಲ್ಲಿ ದಾವೀದನು ಯೆಹೋವನಿಗೋಸ್ಕರ ಯಜ್ಞವೇದಿಯನ್ನು ಕಟ್ಟಿಸಿ, ಅದರ ಮೇಲೆ ಆತನಿಗೆ ಸರ್ವಾಂಗಹೋಮಗಳನ್ನೂ, ಸಮಾಧಾನಯಜ್ಞಗಳನ್ನೂ ಅರ್ಪಿಸಿ, ಯೆಹೋವನನ್ನು ಪ್ರಾರ್ಥಿಸಿದನು. ಯೆಹೋವನು ಅವನ ಮೊರೆಯನ್ನು ಲಾಲಿಸಿ, ಆಕಾಶದಿಂದ ಯಜ್ಞವೇದಿಯ ಮೇಲೆ ಬೆಂಕಿಯನ್ನು ಸುರಿಸಿ,

27ಕತ್ತಿಯನ್ನು ಒರೆಯಲ್ಲಿ ಹಾಕಬೇಕೆಂದು ದೂತನಿಗೆ ಆಜ್ಞಾಪಿಸಿದನು. ಅವನು ಹಾಗೆಯೇ ಮಾಡಿದನು.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು