Bible Explorer ಆ್ಯಪ್ ಪಡೆಯಿರಿ

ಬೈಬಲ್ › ಯೆರೆಮೀಯನು › 47

IRV · ಅಧ್ಯಾಯ 47 / 52

ಯೆರೆಮೀಯನು 47

1ಫರೋಹನು ಗಾಜಾ ಊರನ್ನು ಹೊಡೆದದ್ದಕ್ಕೆ ಮುಂಚಿತವಾಗಿ ಯೆಹೋವನು ಫಿಲಿಷ್ಟಿಯರ ವಿಷಯವಾಗಿ ಪ್ರವಾದಿಯಾದ ಯೆರೆಮೀಯನಿಗೆ ದಯಪಾಲಿಸಿದ ವಾಕ್ಯ.

2ಯೆಹೋವನು ಇಂತೆನ್ನುತ್ತಾನೆ, “ಇಗೋ, ಪ್ರವಾಹವು ಉತ್ತರದಿಕ್ಕಿನಿಂದ ಹೊರಟು ತುಂಬಿತುಳುಕುವ ತೊರೆಯಾಗಿ ದೇಶವನ್ನೂ, ಅದರಲ್ಲಿರುವ ಸಮಸ್ತವನ್ನೂ, ಪಟ್ಟಣವನ್ನೂ ಮತ್ತು ಪಟ್ಟಣದ ನಿವಾಸಿಗಳನ್ನೂ ಆಕ್ರಮಿಸುವುದು. ಆಗ ಅಲ್ಲಿನವರು ಮೊರೆಯಿಡುವರು, ದೇಶದವರೆಲ್ಲಾ ಗೋಳಾಡುವರು.

3ಶತ್ರುವಿನ ಕುದುರೆಗಳ ಗೊರಸುಗಳು ನೆಲವನ್ನು ಅಪ್ಪಳಿಸುವ ಶಬ್ದಕ್ಕೂ, ರಥಗಳ ರಭಸಕ್ಕೂ, ಚಕ್ರಗಳ ಬಿರುಗುಟ್ಟುವಿಕೆಗೂ ತಂದೆಗಳು ಹೆದರುತ್ತಾ ಜೋಲುಗೈ ಉಳ್ಳವರಾಗಿ ತಮ್ಮ ಮಕ್ಕಳನ್ನು ಹಿಂದಿರುಗಿ ನೋಡರು.

4ಏಕೆಂದರೆ ಆ ದಿನದಲ್ಲಿ ಫಿಲಿಷ್ಟಿಯರೆಲ್ಲರೂ ಸೂರೆಯಾಗುವರು, ತೂರಿನ ಮತ್ತು ಚೀದೋನಿನ ಸಹಾಯಕರಲ್ಲಿ ಉಳಿದವರೆಲ್ಲಾ ನಿರ್ಮೂಲವಾಗುವರು; ಕಫ್ತೋರ್ ದ್ವೀಪದವರಿಂದ ಉತ್ಪನ್ನರಾದ ಫಿಲಿಷ್ಟಿಯರನ್ನು ಯೆಹೋವನೇ ಸೂರೆಮಾಡುವನು.

5“ಗಾಜಾ ಊರು ಬೋಳಿಸಿಕೊಂಡಿದೆ, ಅಷ್ಕೆಲೋನ್ ನಾಶಹೊಂದಿದೆ; ಫಿಲಿಷ್ಟಿಯದ ಬಯಲು ಸೀಮೆಯಲ್ಲಿ ಉಳಿದ ಪಟ್ಟಣವೇ, ನಿನ್ನನ್ನು ಎಂದಿನ ವರೆಗೆ ಕತ್ತರಿಸಿಕೊಳ್ಳುತ್ತಿರುವಿ?

6ಅಯ್ಯೋ, ಯೆಹೋವನ ಖಡ್ಗವೇ, ಇನ್ನೆಷ್ಟರವರೆಗೆ ವಿಶ್ರಾಂತಿಗೊಳ್ಳದೆ ಇರುವಿ? ನಿನ್ನನ್ನು ಒರೆಯಲ್ಲಿ ಅಡಗಿಸಿಕೋ! ಶಾಂತವಾಗಿ, ಸುಮ್ಮನಿರು!

7ಖಡ್ಗವು ವಿಶ್ರಾಂತಿಗೊಳ್ಳುವುದು ಹೇಗೆ? ಅಷ್ಕೆಲೋನಿನ ಮತ್ತು ಕರಾವಳಿಯ ವಿಷಯವಾಗಿ ಯೆಹೋವನು ಅದಕ್ಕೆ ಅಪ್ಪಣೆಕೊಟ್ಟನಲ್ಲಾ; ಅಲ್ಲಿಗೆ ಅದನ್ನು ನೇಮಿಸಿದ್ದಾನೆ.”

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ (IRV, 2019) · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. (ಪಠ್ಯ ಬದಲಾಗಿಲ್ಲ; ಅಡಿಟಿಪ್ಪಣಿಗಳು ಮತ್ತು ಶೀರ್ಷಿಕೆಗಳನ್ನು ಬಿಡಲಾಗಿದೆ) · eBible.org