Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಅಕ್ಟೋಬರ್ 2027 › 29 ಅಕ್ಟೋಬರ್

ಆರ್ಥೊಡಾಕ್ಸ್ ಪಂಚಾಂಗ · ಅಕ್ಟೋಬರ್ 16 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 29 ಅಕ್ಟೋಬರ್ 2027

ಶುಕ್ರವಾರ · ಪಂಚಾಶತ್ತಮದ ನಂತರದ 19ನೇ ವಾರ · ಸ್ವರ 1

ಹಬ್ಬಗಳು ಮತ್ತು ಸಂತರು

Martyr Longinus the Centurion, who stood at the Cross of the Lord and with him 2 other Martyrs (1st C)

ಉಪವಾಸದ ದಿನ

ಉಪವಾಸ: ಎಣ್ಣೆಯೊಂದಿಗೆ

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಪತ್ರಿಕೆ

ಫಿಲಿಪ್ಪಿ 1:27–2:4

27ಹೇಗೂ ಕ್ರಿಸ್ತನ ಸುವಾರ್ತೆಗೆ ಯೋಗ್ಯರಾಗಿ ನಡೆದುಕೊಳ್ಳಿರಿ. ಆಗ ನಾನು ಬಂದು ನಿಮ್ಮನ್ನು ನೋಡಿದರೂ ಸರಿಯೇ, ದೂರದಲ್ಲಿದ್ದು ನಿಮ್ಮ ಸುದ್ದಿಯನ್ನು ಕೇಳಿದರೂ ಸರಿಯೇ, ನೀವು ನಿಮ್ಮ ವಿರೋಧಿಗಳಿಗೆ ಯಾವ ವಿಷಯದಲ್ಲಾದರೂ ಹೆದರದೆ ಏಕಮನಸ್ಸಿನಿಂದ ದೃಢವಾಗಿ ನಿಂತು ಸುವಾರ್ತೆಯಲ್ಲಿಟ್ಟ ನಂಬಿಕೆಗೋಸ್ಕರ ಐಕಮತ್ಯದಿಂದ ಹೋರಾಡುವವರಾಗಿದ್ದೀರೆಂದು ನಾನು ತಿಳಿದುಕೊಳ್ಳುವೆನು. 28ನೀವು ಹೀಗಿರುವುದು ವಿರೋಧಿಗಳ ನಾಶನಕ್ಕೂ, ನಿಮ್ಮ ರಕ್ಷಣೆಗೂ ಒಂದು ಗುರುತಾಗಿದೆ. ಅದು ದೇವರಿಂದಾದ ಮುನ್ಸೂಚನೆಯಾಗಿದೆ. 29ಕ್ರಿಸ್ತನ ಮೇಲೆ ನಂಬಿಕೆಯಿಡುವುದು ಮಾತ್ರವಲ್ಲ ಆತನಿಗೋಸ್ಕರ ಬಾಧೆಯನ್ನನುಭವಿಸುವುದು ನಿಮಗೆ ವರವಾಗಿ ದೊರಕಿದೆ. 30ಹೀಗೆ ನೀವು ನನ್ನಲ್ಲಿ ಕಂಡಂಥ ಮತ್ತು ಈಗ ನನ್ನ ಕುರಿತಾಗಿ ಕೇಳುವಂಥ ಅದೇ ಹೋರಾಟವು ನಿಮಗೂ ಉಂಟು. 2:1ಕ್ರಿಸ್ತನಿಂದ ಪ್ರೋತ್ಸಾಹ, ಪ್ರೀತಿಯ ಸಾಂತ್ವನ, ಪವಿತ್ರಾತ್ಮನ ಅನ್ಯೋನ್ಯತೆ, ಕಾರುಣ್ಯದಯಾರಸಗಳು ಉಂಟಾಗುವುದಾದರೆ, 2ನೀವೆಲ್ಲರು ಒಂದೇ ಮನಸ್ಸುವುಳ್ಳವರಾಗಿ, ಒಂದೇ ಪ್ರೀತಿಯುಳ್ಳವರಾಗಿ, ಅನ್ಯೋನ್ಯಭಾವವುಳ್ಳವರಾಗಿ ಹಾಗೂ ಒಂದೇ ಗುರಿಯಿಟ್ಟುಕೊಂಡವರಾಗಿ ನನ್ನ ಸಂತೋಷವನ್ನು ಪರಿಪೂರ್ಣಮಾಡಿರಿ. 3ಸ್ವಾರ್ಥದಿಂದಾಗಲಿ, ಒಣ ಹೆಮ್ಮೆಯಿಂದಾಗಲಿ ಯಾವುದನ್ನೂ ಮಾಡದೆ, ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ. 4ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ.

ಸುವಾರ್ತೆ

ಲೂಕ 9:12–18

12ಸಂಜೆಯಾಗುತ್ತಿರಲು, ಆ ಹನ್ನೆರಡು ಮಂದಿ ಶಿಷ್ಯರು ಯೇಸುವಿನ ಬಳಿಗೆ ಬಂದು, “ಈ ಗುಂಪಿಗೆ ಅಪ್ಪಣೆಕೊಡು; ಇವರು ಸುತ್ತಲಿರುವ ಹಳ್ಳಿಪಳ್ಳಿಗಳಿಗೆ ಹೋಗಿ ಅವರಿಗೋಸ್ಕರ ಊಟವಸತಿಗಳನ್ನು ಏರ್ಪಡಿಸಿಕೊಳ್ಳಲಿ; ನಾವು ಇಲ್ಲಿ ನಿರ್ಜನ ಪ್ರದೇಶದಲ್ಲಿ ಇದ್ದೇವಲ್ಲಾ” ಎಂದು ಆತನಿಗೆ ಹೇಳಲಾಗಿ, 13ಆತನು, “ನೀವೇ ಅವರಿಗೆ ಊಟಕ್ಕೆ ಕೊಡಿರಿ” ಅಂದನು. ಅದಕ್ಕವರು, “ನಮ್ಮಲ್ಲಿ ಐದು ರೊಟ್ಟಿ ಎರಡು ಮೀನು ಹೊರತು ಹೆಚ್ಚೇನೂ ಇಲ್ಲ, ನಾವು ಹೋಗಿ ಈ ಜನರಿಗೆಲ್ಲಾ ಆಹಾರವನ್ನು ಕೊಂಡು ತರಬೇಕೋ?” ಅಂದರು. 14ಅಲ್ಲಿ ಗಂಡಸರೇ ಹೆಚ್ಚು ಕಡಿಮೆ ಐದು ಸಾವಿರ ಮಂದಿಯಿದ್ದರು. ಆಗ ಯೇಸುವು ತನ್ನ ಶಿಷ್ಯರಿಗೆ, “ಇವರನ್ನು ಒಂದೊಂದು ಪಂಕ್ತಿಗೆ ಹೆಚ್ಚುಕಡಿಮೆ ಐವತ್ತೈವತ್ತರಂತೆ ಕೂರಿಸಿರಿ” ಎಂದು ಹೇಳಲು, 15ಅವರು ಅದರಂತೆ ಮಾಡಿ ಎಲ್ಲರನ್ನೂ ಕುಳ್ಳಿರಿಸಿದರು. 16ಆ ಮೇಲೆ ಯೇಸುವು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ಅವುಗಳನ್ನು ಆಶೀರ್ವದಿಸಿ, ಮುರಿದು ಶಿಷ್ಯರ ಕೈಗೆ ಕೊಟ್ಟು, ಇದನ್ನು ಜನರ ಗುಂಪಿಗೆ ಹಂಚಿರಿ ಅಂದನು. 17ಅವರೆಲ್ಲರು ಊಟಮಾಡಿ ತೃಪ್ತರಾದರು; ನಂತರ ಉಳಿದ ತುಂಡುಗಳನ್ನು ಕೂಡಿಸಲಾಗಿ ಅವು ಹನ್ನೆರಡು ಪುಟ್ಟಿ ಆದವು. 18ಒಂದು ದಿನ ಯೇಸುವು ಏಕಾಂತವಾಗಿ ಪ್ರಾರ್ಥನೆಮಾಡುತ್ತಿರುವಾಗ ಆತನ ಶಿಷ್ಯರು ಆತನ ಸಂಗಡ ಇದ್ದರು. ಅನಂತರ ಆತನು ಅವರಿಗೆ, “ಜನರು ನನ್ನನ್ನು ಕುರಿತು ಏನು ಹೇಳುತ್ತಾರೆ?” ಎಂದು ಶಿಷ್ಯರನ್ನು ಕೇಳಲು,

ಸುವಾರ್ತೆ (ಶತಾಧಿಪತಿ ಸಂತ ಲೊಂಗಿನಸ್)

ಮತ್ತಾ 27:33–54

33ಅವರೆಲ್ಲರೂ ಗೊಲ್ಗೊಥಾ ಅಂದರೆ “ಕಪಾಲಸ್ಥಳ” ಎಂಬ ಸ್ಥಾನಕ್ಕೆ ಬಂದಾಗ 34ಆತನಿಗೆ ಕಹಿ ಬೆರಸಿದ ದ್ರಾಕ್ಷಾರಸವನ್ನು ಕುಡಿಯುವುದಕ್ಕೆ ಕೊಟ್ಟರು; ಆತನು ಅದನ್ನು ರುಚಿ ನೋಡಿ ಕುಡಿಯಲಾರದೆ ಇದ್ದನು. 35ಬಳಿಕ ಅವರು ಆತನನ್ನು ಶಿಲುಬೆಗೆ ಹಾಕಿ ಆತನ ಬಟ್ಟೆಗಳಿಗಾಗಿ ಚೀಟು ಹಾಕಿ ಪಾಲುಮಾಡಿಕೊಂಡರು; 36ಮತ್ತು ಅಲ್ಲಿ ಕುಳಿತುಕೊಂಡು ಆತನನ್ನು ಕಾಯುತ್ತಾ ಇದ್ದರು. 37ಇದಲ್ಲದೆ ಆತನ ಮೇಲೆ ಹೊರಿಸಿದ ಅಪರಾಧವನ್ನು ಬರೆದು ಆತನ ತಲೆಯ ಮೇಲ್ಗಡೆ ಹಚ್ಚಿದರು; ಅದೇನೆಂದರೆ, “ಈತನು ಯೇಸು, ಯೆಹೂದ್ಯರ ಅರಸನು” ಎಂಬುದೇ. 38ಆಗ ಇಬ್ಬರು ಕಳ್ಳರನ್ನು ತಂದು ಒಬ್ಬನನ್ನು ಬಲಗಡೆಯಲ್ಲಿ ಮತ್ತೊಬ್ಬನನ್ನು ಎಡಗಡೆಯಲ್ಲಿ ಆತನ ಸಂಗಡ ಶಿಲುಬೆಗೆ ಹಾಕಿದರು. 39ಅಲ್ಲಿ ಹಾದುಹೋಗುತ್ತಿರುವವರು ತಲೆ ಅಲ್ಲಾಡಿಸಿ, 40“ದೇವಾಲಯವನ್ನು ಕೆಡವಿ ಮೂರು ದಿನದಲ್ಲಿ ಕಟ್ಟುವವನೇ, ನಿನ್ನನ್ನು ರಕ್ಷಿಸಿಕೊ; ನೀನು ದೇವರ ಮಗನೇ ಆಗಿದ್ದರೆ ಶಿಲುಬೆಯಿಂದ ಇಳಿದು ಬಾ” ಎಂದು ಆತನನ್ನು ಹಂಗಿಸುತ್ತಿದ್ದರು. 41ಅದೇ ರೀತಿ ಮುಖ್ಯಯಾಜಕರೂ, ಶಾಸ್ತ್ರಿಗಳೂ, ಹಿರಿಯರೂ, “ಅವನು ಮತ್ತೊಬ್ಬರನ್ನು ರಕ್ಷಿಸಿದನು, ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು. 42ಅವನು ಇಸ್ರಾಯೇಲಿನ ಅರಸನಲ್ಲವೇ. ಈಗ ಶಿಲುಬೆಯಿಂದ ಇಳಿದು ಬರಲಿ, ಇಳಿದು ಬಂದರೆ ಅವನಲ್ಲಿ ನಂಬಿಕೆಯಿಡುತ್ತೇವೆ ಅಂದರು. 43ಅವನು ದೇವರಲ್ಲಿ ಭರವಸವಿಟ್ಟಿದ್ದಾನೆ, ದೇವರಿಗೆ ಇಷ್ಟವಿದ್ದರೆ ಈಗ ಅವನನ್ನು ಬಿಡಿಸಲಿ; ‘ತಾನು ದೇವರ ಮಗನಾಗಿದ್ದೇನೆಂದು ಹೇಳಿದನಲ್ಲಾ’” ಎಂದು ಅಣಕಿಸಿ ಮಾತನಾಡುತ್ತಿದ್ದರು. 44ಆತನ ಸಂಗಡ ಶಿಲುಬೆಗೆ ಹಾಕಲ್ಪಟ್ಟ ಕಳ್ಳರು ಸಹ ಆತನನ್ನು ಅದೇ ಪ್ರಕಾರ ನಿಂದಿಸುತ್ತಿದ್ದರು. 45ಮಧ್ಯಾಹ್ನ ಹನ್ನೆರಡು ಘಂಟೆಯಿಂದ ಮೂರು ಘಂಟೆಯ ವರೆಗೆ ಆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು. 46ಸುಮಾರು ಮೂರು ಘಂಟೆಗೆ ಯೇಸು, “ಏಲೀ, ಏಲೀ, ಲಮಾ ಸಬಕ್ತಾನೀ” ಅಂದರೆ, “ನನ್ನ ದೇವರೇ, ನನ್ನ ದೇವರೇ, ಏಕೆ ನನ್ನನ್ನು ಕೈಬಿಟ್ಟಿದ್ದೀ” ಎಂದು ಮಹಾ ಧ್ವನಿಯಿಂದ ಕೂಗಿದನು. 47ಅಲ್ಲಿ ನಿಂತಿದ್ದವರಲ್ಲಿ ಕೆಲವರು ಅದನ್ನು ಕೇಳಿ, “ಇವನು ಎಲೀಯನನ್ನು ಕರೆಯುತ್ತಿದ್ದಾನೆ” ಅಂದನು. 48ಕೂಡಲೆ ಅವರಲ್ಲಿ ಒಬ್ಬನು ಓಡಿಹೋಗಿ ಸ್ಪಂಜನ್ನು ತಂದು ಹುಳಿರಸದಿಂದ ತುಂಬಿಸಿ ಕೋಲಿಗೆ ಸಿಕ್ಕಿಸಿ ಆತನಿಗೆ ಕುಡಿಯುವುದಕ್ಕೆ ಕೊಟ್ಟನು. 49ಮಿಕ್ಕಾದವರು, “ಬಿಡು, ಎಲೀಯನು ಬಂದು ಅವನನ್ನು ರಕ್ಷಿಸುವನೇನೋ ನೋಡೋಣ” ಅಂದರು. 50ಅನಂತರ ಯೇಸು ತಿರುಗಿ ಮಹಾ ಧ್ವನಿಯಿಂದ ಕೂಗಿ ಪ್ರಾಣಬಿಟ್ಟನು. 51ಆಗ ಇಗೋ, ದೇವಾಲಯದ ಪರದೆಯು ಮೇಲಿಂದ ಕೆಳಗಿನವರೆಗೂ ಹರಿದು ಎರಡು ಭಾಗವಾಯಿತು; ಭೂಮಿಯು ನಡುಗಿತು; 52ಬಂಡೆಗಳು ಸೀಳಿಹೋದವು; ಸಮಾಧಿಗಳು ತೆರೆದವು; ನಿದ್ರೆಹೋಗಿದ್ದ ಅನೇಕ ಭಕ್ತರ ದೇಹಗಳು ಜೀವದಿಂದ ಎದ್ದವು; 53ಮತ್ತು ಆತನ ಪುನರುತ್ಥಾನವಾದ ಮೇಲೆ ಸಮಾಧಿಗಳೊಳಗಿಂದ ಹೊರಗೆ ಬಂದು ಪರಿಶುದ್ಧ ಪಟ್ಟಣದೊಳಗೆ ಹೋಗಿ ಅನೇಕರಿಗೆ ಕಾಣಿಸಿಕೊಂಡರು. 54ಶತಾಧಿಪತಿಯು ಮತ್ತು ಅವನ ಸಂಗಡ ಯೇಸುವನ್ನು ಕಾಯುತ್ತಿದ್ದವರು ಭೂಕಂಪವನ್ನೂ, ನಡೆದ ಸಂಗತಿಗಳನ್ನೂ ನೋಡಿ ಬಹಳ ಹೆದರಿಕೊಂಡು, “ನಿಜವಾಗಿ ಈತನು ದೇವಕುಮಾರನಾಗಿದ್ದನು” ಅಂದರು.

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 16 ಅಕ್ಟೋಬರ್ ಎಂದರೆ ನಾಗರಿಕ ಪಂಚಾಂಗದ 29 ಅಕ್ಟೋಬರ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು