ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಸೆಪ್ಟೆಂಬರ್ 2027 › 7 ಸೆಪ್ಟೆಂಬರ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 7 ಸೆಪ್ಟೆಂಬರ್ 2027
ಮಂಗಳವಾರ · ಸಾಮಾನ್ಯ ಕಾಲದ 23ನೇ ವಾರ
ಹಬ್ಬಗಳು ಮತ್ತು ಸಂತರು
ಸಾಮಾನ್ಯ ಕಾಲದ 23ನೇ ವಾರದ ಮಂಗಳವಾರ
ವಾರದ ದಿನ · ಆರಾಧನಾ ಬಣ್ಣ: ಹಸಿರು
ದಿನದ ವಾಚನಗಳು
ಮೊದಲನೆಯ ವಾಚನ
6ನೀವು ಕರ್ತನಾದ ಯೇಸು ಕ್ರಿಸ್ತನನ್ನು ಸ್ವೀಕರಿಸಿದಂತೆಯೇ ಆತನಲ್ಲಿದ್ದವರಾಗಿ ಬಾಳಿರಿ. 7ಆತನಲ್ಲಿ ಬೇರೂರಿಕೊಂಡು, ಆತನಲ್ಲಿ ಕಟ್ಟಲ್ಪಟ್ಟು ಮತ್ತು ನಿಮಗೆ ಬೋಧಿಸಲ್ಪಟ್ಟ ಉಪದೇಶದ ಪ್ರಕಾರವೇ ಕ್ರಿಸ್ತ ನಂಬಿಕೆಯಲ್ಲಿ ನೆಲೆಗೊಂಡು ದೇವರಿಗೆ ಹೆಚ್ಚೆಚ್ಚಾಗಿ ಸ್ತೋತ್ರ ಸಲ್ಲಿಸುವವರಾಗಿರಿ. 8ಮೋಸಕರವಾದ ಮತ್ತು ವ್ಯರ್ಥವಾದ ತತ್ವಜ್ಞಾನ ಬೋಧನೆಯಿಂದ ಯಾರೂ ನಿಮ್ಮನ್ನು ವಶಮಾಡಿಕೊಳ್ಳದಂತೆ ಎಚ್ಚರಿಕೆಯಾಗಿರಿ. ಇವುಗಳು ಮನುಷ್ಯರ ಸಂಪ್ರದಾಯಗಳಿಗೆ ಮತ್ತು ಪ್ರಾಪಂಚಿಕ ಮೂಲ ಬೋಧನೆಗಳಿಗೆ ಸಂಬಂಧಿಸಿದವುಗಳೇ ಹೊರತು ಕ್ರಿಸ್ತನಿಗಲ್ಲ. 9ದೇವರ ಸರ್ವಸಂಪೂರ್ಣತೆಯು ಕ್ರಿಸ್ತನ ದೇಹದಲ್ಲಿ ವಾಸಮಾಡುತ್ತಿದೆ, 10ಆತನು ಎಲ್ಲಾ ದೊರೆತನಗಳಿಗೂ ಹಾಗೂ ಅಧಿಕಾರಿಗಳಿಗೂ ತಲೆಯಾಗಿರುವುದರಿಂದ ಆತನಲ್ಲಿದ್ದುಕೊಂಡೇ ನೀವು ಪರಿಪೂರ್ಣತೆಯನ್ನು ಹೊಂದಿದವರಾಗಿದ್ದೀರಿ. 11ದೇವರು ಆತನಲ್ಲಿ ನಿಮಗೆ ಮನುಷ್ಯರ ಕೈಯಿಂದ ಮಾಡಲಾಗದಂತಹ ಸುನ್ನತಿಯನ್ನು ಮಾಡಿದ್ದಾನೆ. ಕ್ರಿಸ್ತನ ಸುನ್ನತಿಯು ಶಾರೀರಿಕವಾದ ಪಾಪಸ್ವಭಾವವನ್ನು ತೆಗೆದುಹಾಕುವುದೇ. 12ನೀವು ದೀಕ್ಷಾಸ್ನಾನದಲ್ಲಿ ಕ್ರಿಸ್ತನೊಂದಿಗೆ ಹೂಣಲ್ಪಟ್ಟಿದ್ದೀರಿ, ಮತ್ತು ಆತನನ್ನು ಸತ್ತವರೊಳಗಿಂದ ಎಬ್ಬಿಸಿದ ದೇವರ ಶಕ್ತಿಯಲ್ಲಿ ನಂಬಿಕೆಯಿಡುವುದರ ಮೂಲಕ ಆತನ ಜೊತೆಯಲ್ಲಿ ನೀವು ಎದ್ದು ಬಂದಿದ್ದೀರಿ. 13ಅಪರಾಧಗಳನ್ನು ಮಾಡುವುದರಿಂದಲೂ ಹಾಗೂ ಸುನ್ನತಿಯಿಲ್ಲದ ಶರೀರಭಾವದಿಂದಲೂ ಸತ್ತವರಾಗಿದ್ದ ನಿಮ್ಮನ್ನು ದೇವರು ಕ್ರಿಸ್ತನೊಂದಿಗೆ ಬದುಕಿಸಿದ್ದಾನೆ ಮತ್ತು ನಮ್ಮ ಅಪರಾಧಗಳನ್ನೆಲ್ಲಾ ಕ್ಷಮಿಸಿದ್ದಾನೆ. 14ನಮ್ಮ ಮೇಲೆ ದೋಷಾರೋಪಣೆ ಮಾಡಿದಂಥ ಆಜ್ಞಾರೂಪವಾಗಿದ್ದಂಥ ಪತ್ರವನ್ನು ತೊಡೆದುಹಾಕಿ ಅದನ್ನು ಶಿಲುಬೆಗೆ ಜಡಿದು ಇಲ್ಲದಂತಾಗಿ ಮಾಡಿದನು. 15ಆತನು ದೊರೆತನಗಳನ್ನೂ ಮತ್ತು ಅಧಿಕಾರಗಳನ್ನೂ ನಿರಾಯುಧರನ್ನಾಗಿ ಮಾಡಿ, ತನ್ನ ಶಿಲುಬೆಯ ಮೂಲಕ ಅವುಗಳನ್ನು ಜಯಿಸಿ ಬಹಿರಂಗಪಡಿಸಿದನು.
ಪ್ರತಿವಚನ ಕೀರ್ತನೆ
1ದಾವೀದನ ಕೀರ್ತನೆ. ನನ್ನ ದೇವರೇ, ರಾಜನೇ, ನಿನ್ನನ್ನು ಘನಪಡಿಸುವೆನು, ನಿನ್ನ ನಾಮವನ್ನು ಯುಗಯುಗಾಂತರಗಳಲ್ಲಿಯೂ ಕೊಂಡಾಡುವೆನು. 2ಪ್ರತಿದಿನವೂ ನಿನ್ನನ್ನು ಕೀರ್ತಿಸುವೆನು, ನಿನ್ನ ನಾಮವನ್ನು ಯುಗಯುಗಾಂತರಗಳಲ್ಲಿಯೂ ಸ್ತುತಿಸುವೆನು. 8ಯೆಹೋವನು ದಯೆಯು, ಕನಿಕರವು ಉಳ್ಳವನು, ದೀರ್ಘಶಾಂತನು, ಪ್ರೀತಿಪೂರ್ಣನು ಆಗಿದ್ದಾನೆ. 9ಯೆಹೋವನು ಸರ್ವೋಪಕಾರಿಯು, ತಾನು ನಿರ್ಮಿಸಿದವುಗಳನ್ನೆಲ್ಲಾ ಕರುಣಿಸುವಾತನೂ ಆಗಿದ್ದಾನೆ. 10ಯೆಹೋವನೇ, ನಿನ್ನ ಸೃಷ್ಟಿಯೆಲ್ಲವು ನಿನ್ನನ್ನು ಸ್ತುತಿಸುವುದು, ನಿನ್ನ ಭಕ್ತರು ನಿನ್ನನ್ನು ಕೊಂಡಾಡುವರು. 11ಅವರು ನಿನ್ನ ರಾಜ್ಯಮಹತ್ತನ್ನು ಪ್ರಸಿದ್ಧಪಡಿಸುವರು, ನಿನ್ನ ಪ್ರತಾಪವನ್ನು ವರ್ಣಿಸುವರು.
ಸುವಾರ್ತೆ
12ಆ ದಿನಗಳಲ್ಲಿ ಯೇಸು ಪ್ರಾರ್ಥನೆ ಮಾಡಲು ಬೆಟ್ಟಕ್ಕೆ ಹೋಗಿ ರಾತ್ರಿಯೆಲ್ಲಾ ದೇವರನ್ನು ಪ್ರಾರ್ಥಿಸುವುದರಲ್ಲಿ ಕಳೆದನು. 13ಬೆಳಗಾದ ಮೇಲೆ ಆತನು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡು ಅವರಿಗೆ ಅಪೊಸ್ತಲರೆಂದು ಹೆಸರಿಟ್ಟನು. 14ಅವರು ಯಾರಾರೆಂದರೆ, ಆತನಿಂದ ಪೇತ್ರನೆಂಬ ಹೆಸರನ್ನು ಹೊಂದಿದ ಸೀಮೋನ, ಅವನ ತಮ್ಮನಾದ ಅಂದ್ರೆಯ, ಯಾಕೋಬ, ಯೋಹಾನ, ಫಿಲಿಪ್ಪ, ಬಾರ್ತೊಲೊಮಾಯ, 15ಮತ್ತಾಯ, ತೋಮ, ಅಲ್ಫಾಯನ ಮಗನಾದ ಯಾಕೋಬ, ಮತಾಭಿಮಾನಿ ಅನ್ನಿಸಿಕೊಂಡ ಸೀಮೋನ, 16ಯಾಕೋಬನ ಮಗನಾದ ಯೂದ, ಆತನನ್ನು ಹಿಡಿದುಕೊಡುವ ದ್ರೋಹಿಯಾದ ಇಸ್ಕರಿಯೋತ ಯೂದ. 17ಆ ಮೇಲೆ ಯೇಸು ಅವರೊಂದಿಗೆ ಬೆಟ್ಟದಿಂದ ಇಳಿದು ಸಮಭೂಮಿಯಲ್ಲಿ ಬಂದು ನಿಂತನು. ಆತನ ಶಿಷ್ಯರ ದೊಡ್ಡಗುಂಪು ಮತ್ತು ಎಲ್ಲಾ ಯೂದಾಯದಿಂದಲೂ, ಯೆರೂಸಲೇಮಿನಿಂದಲೂ, ತೂರ್, ಸೀದೋನ್ ಪಟ್ಟಣಗಳ ಕರಾವಳಿತೀರದಿಂದಲೂ ಬಂದಿದ್ದ ಜನರ ಮಹಾಸಮೂಹವು ಆತನ ಸಂಗಡ ಇದ್ದಿತು. 18ಆ ಜನರು ಆತನ ಉಪದೇಶವನ್ನು ಕೇಳುವುದಕ್ಕೂ ತಮ್ಮ ರೋಗಗಳನ್ನು ವಾಡಿಸಿಮಾಡಿಸಿಕೊಳ್ಳುವುದಕ್ಕೂ ಬಂದಿದ್ದರು. ದೆವ್ವಪೀಡಿತರು ಸಹ ಬಂದು ಸ್ವಸ್ಥರಾದರು. 19ಮತ್ತು ಆತನಿಂದ ಶಕ್ತಿ ಹೊರಟು ಎಲ್ಲರನ್ನೂ ವಾಸಿಮಾಡುತ್ತಿದ್ದುದರಿಂದ, ಆ ಗುಂಪಿನ ಜನರೆಲ್ಲಾ ಆತನನ್ನು ಮುಟ್ಟುವುದಕ್ಕೆ ಪ್ರಯತ್ನಪಟ್ಟರು.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು