Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಆಗಸ್ಟ್ 2027 › 24 ಆಗಸ್ಟ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 24 ಆಗಸ್ಟ್ 2027

ಮಂಗಳವಾರ · ಸಾಮಾನ್ಯ ಕಾಲದ 21ನೇ ವಾರ

ಹಬ್ಬಗಳು ಮತ್ತು ಸಂತರು

ಸಂತ ಬಾರ್ತೊಲೊಮಾಯ, ಅಪೊಸ್ತಲ

ಹಬ್ಬ · ಆರಾಧನಾ ಬಣ್ಣ: ಕೆಂಪು

ದಿನದ ವಾಚನಗಳು

ಮೊದಲನೆಯ ವಾಚನ

ಪ್ರಕ 21:9–14

9ಕಡೇ ಏಳು ಉಪದ್ರವಗಳಿಂದ ತುಂಬಿದ ಏಳು ಬಟ್ಟಲುಗಳನ್ನು ಹಿಡಿದಿದ್ದ ಏಳು ಮಂದಿ ದೇವದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತನಾಡುತ್ತಾ, “ಬಾ ಕುರಿಮರಿಯಾದಾತನಿಗೆ ಹೆಂಡತಿಯಾಗಲಿರುವ ವಧುವನ್ನು ನಿನಗೆ ತೋರಿಸುವೆನು” ಎಂದು ಹೇಳಿ, 10ದೇವರಾತ್ಮನಲ್ಲಿ ನನ್ನನ್ನು ಎತ್ತರವಾದ ದೊಡ್ಡ ಬೆಟ್ಟಕ್ಕೆ ಎತ್ತಿಕೊಂಡು ಹೋಗಿ, ಯೆರೂಸಲೇಮೆಂಬ ಪರಿಶುದ್ಧ ಪಟ್ಟಣವು ಪರಲೋಕದೊಳಗಿಂದ, ದೇವರ ಬಳಿಯಿಂದ ಇಳಿದುಬರುವುದನ್ನು ನನಗೆ ತೋರಿಸಿದನು. 11ಅದು ದೇವರ ತೇಜಸ್ಸಿನಿಂದ ಕೂಡಿತ್ತು. ಪಟ್ಟಣವು ಅಮೂಲ್ಯ ರತ್ನದ ಪ್ರಕಾಶಕ್ಕೆ ಸಮಾನವಾಗಿತ್ತು, ಸ್ವಚ್ಛವಾದ ಸ್ಫಟಿಕದಂತೆ ಶುಭ್ರವಾಗಿತ್ತು. 12ಆ ಪಟ್ಟಣಕ್ಕೆ ಎತ್ತರವಾದ ದೊಡ್ಡ ಗೋಡೆ ಇತ್ತು. ಅದಕ್ಕೆ ಹನ್ನೆರಡು ಹೆಬ್ಬಾಗಿಲುಗಳಿದ್ದವು. ಆ ಬಾಗಿಲುಗಳ ಬಳಿಯಲ್ಲಿ ಹನ್ನೆರಡು ಮಂದಿ ದೇವದೂತರಿದ್ದರು. ಅವುಗಳ ಮೇಲೆ ಇಸ್ರಾಯೇಲ್ಯರ ಹನ್ನೆರಡು ಕುಲಗಳ ಹೆಸರುಗಳು ಬರೆಯಲ್ಪಟ್ಟಿದ್ದವು. 13ಪೂರ್ವ ದಿಕ್ಕಿನಲ್ಲಿ ಮೂರು ಬಾಗಿಲುಗಳು, ಉತ್ತರ ದಿಕ್ಕಿನಲ್ಲಿ ಮೂರು ಬಾಗಿಲುಗಳು ದಕ್ಷಿಣ ದಿಕ್ಕಿನಲ್ಲಿ ಮೂರು ಬಾಗಿಲುಗಳು ಪಶ್ಚಿಮ ದಿಕ್ಕಿನಲ್ಲಿ ಮೂರು ಬಾಗಿಲುಗಳು ಇದ್ದವು. 14ಪಟ್ಟಣದ ಪ್ರಾಕಾರಕ್ಕೆ ಹನ್ನೆರಡು ಅಸ್ತಿವಾರಗಳಿದ್ದವು. ಅವುಗಳ ಮೇಲೆ ಯಜ್ಞದ ಕುರಿಮರಿಯಾದಾತನ ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳಿದ್ದವು.

ಪ್ರತಿವಚನ ಕೀರ್ತನೆ

ಕೀರ್ತ 145:10–13, 17–18

10ಯೆಹೋವನೇ, ನಿನ್ನ ಸೃಷ್ಟಿಯೆಲ್ಲವು ನಿನ್ನನ್ನು ಸ್ತುತಿಸುವುದು, ನಿನ್ನ ಭಕ್ತರು ನಿನ್ನನ್ನು ಕೊಂಡಾಡುವರು. 11ಅವರು ನಿನ್ನ ರಾಜ್ಯಮಹತ್ತನ್ನು ಪ್ರಸಿದ್ಧಪಡಿಸುವರು, ನಿನ್ನ ಪ್ರತಾಪವನ್ನು ವರ್ಣಿಸುವರು. 12ಹೀಗೆ ಮಾನವರು ನಿನ್ನ ಶೂರಕೃತ್ಯಗಳನ್ನೂ, ನಿನ್ನ ರಾಜ್ಯದ ಮಹಾಪ್ರಭಾವವನ್ನೂ ಗ್ರಹಿಸಿಕೊಳ್ಳುವರು. 13ನಿನ್ನ ರಾಜ್ಯವು ಶಾಶ್ವತವಾಗಿದೆ, ನಿನ್ನ ಆಳ್ವಿಕೆಯು ತಲತಲಾಂತರಕ್ಕೂ ಇರುವುದು. 17ಯೆಹೋವನ ಮಾರ್ಗಗಳೆಲ್ಲಾ ನೀತಿಯುಳ್ಳವುಗಳು, ಆತನು ಎಲ್ಲಾ ಕಾರ್ಯಗಳಲ್ಲಿ ಕೃಪೆ ತೋರಿಸುವವನು. 18ಯೆಹೋವನಿಗೆ ಮೊರೆಯಿಡುವವರು, ಯಥಾರ್ಥವಾಗಿ ಮೊರೆಯಿಡುವುದಾದರೆ ಆತನು ಹತ್ತಿರವಾಗಿಯೇ ಇದ್ದಾನೆ.

ಸುವಾರ್ತೆ

ಯೋಹಾ 1:45–51

45ಫಿಲಿಪ್ಪನು ನತಾನಯೇಲನನ್ನು ಕಂಡು ಅವನಿಗೆ “ಮೋಶೆಯು ಧರ್ಮಶಾಸ್ತ್ರದಲ್ಲಿ ಯಾರ ವಿಷಯವಾಗಿ ಬರೆದನೋ ಮತ್ತು ಪ್ರವಾದಿಗಳು ಯಾರ ವಿಚಾರವಾಗಿ ಬರೆದರೋ ಆತನು ನಮಗೆ ಸಿಕ್ಕಿದನು, ಆತನು ಯಾರೆಂದರೆ ಯೋಸೇಫನ ಮಗನಾದ ನಜರೇತಿನ ಯೇಸುವೇ” ಎಂದು ಹೇಳಿದನು. 46ನತಾನಯೇಲನು “ನಜರೇತಿನಿಂದ ಒಳ್ಳೆಯದೇನಾದರೂ ಬರಲು ಸಾಧ್ಯವೋ?” ಎಂದು ಕೇಳಲು, ಫಿಲಿಪ್ಪನು “ಬಂದು ನೋಡು,” ಅಂದನು. 47ಯೇಸು ತನ್ನ ಕಡೆಗೆ ಬರುವ ನತಾನಯೇಲನನ್ನು ಕಂಡು ಅವನನ್ನು ಕುರಿತು “ಇಗೋ, ಇವನು ನಿಜವಾದ ಇಸ್ರಾಯೇಲನು, ಇವನಲ್ಲಿ ಕಪಟವಿಲ್ಲ” ಎಂದು ಹೇಳಿದನು. 48ಅದಕ್ಕೆ ನತಾನಯೇಲನು “ನೀನು ನನ್ನನ್ನು ಹೇಗೆ ಬಲ್ಲೆ?” ಎಂದು ಯೇಸುವನ್ನು ಕೇಳಿದ್ದಕ್ಕೆ ಆತನು “ಫಿಲಿಪ್ಪನು ನಿನ್ನನ್ನು ಕರೆಯುವುದಕ್ಕಿಂತ ಮೊದಲೇ ನೀನು ಆ ಅಂಜೂರದ ಮರದ ಕೆಳಗಿರುವುದನ್ನು ನಾನು ನೋಡಿದೆನು” ಎಂದು ಹೇಳಿದನು. 49ಅದಕ್ಕೆ ನತಾನಯೇಲನು, “ಗುರುವೇ, ನೀನು ದೇವಕುಮಾರನು! ನೀನೇ ಇಸ್ರಾಯೇಲಿನ ಅರಸನು” ಎಂದನು. 50ಅದಕ್ಕೆ ಯೇಸು “ಆ ಅಂಜೂರದ ಮರದ ಕೆಳಗೆ ನಿನ್ನನ್ನು ನೋಡಿದೆನೆಂದು ನಾನು ನಿನಗೆ ಹೇಳಿದ ಮಾತ್ರಕ್ಕೆ ನಂಬುತ್ತೀಯೋ? ನೀನು ಇವುಗಳಿಗಿಂತಲೂ ಹೆಚ್ಚಿನ ಮಹತ್ಕಾರ್ಯಗಳನ್ನು ನೋಡುವೆ,” ಎಂದನು. 51ಯೇಸು “ನಾನು ನಿಮಗೆ ನಿಜ ನಿಜವಾಗಿ ಹೇಳುತ್ತೇನೆ. ಪರಲೋಕವು ತೆರೆದಿರುವುದನ್ನೂ ಮನುಷ್ಯಕುಮಾರನ ಮೇಲೆ ದೇವದೂತರು ಏರುತ್ತಾ ಇಳಿಯುತ್ತಾ ಇರುವುದನ್ನೂ ನೀವು ನೋಡುವಿರಿ” ಎಂದು ಹೇಳಿದನು.

ಇಂದಿನ ಸಂತರು

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು