ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜೂನ್ 2027 › 27 ಜೂನ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 27 ಜೂನ್ 2027
ಭಾನುವಾರ · ಸಾಮಾನ್ಯ ಕಾಲದ 13ನೇ ವಾರ
ಹಬ್ಬಗಳು ಮತ್ತು ಸಂತರು
ಸಾಮಾನ್ಯ ಕಾಲದ 13ನೇ ಭಾನುವಾರ
ಭಾನುವಾರ · ಆರಾಧನಾ ಬಣ್ಣ: ಹಸಿರು
ದಿನದ ವಾಚನಗಳು
ಮೊದಲನೆಯ ವಾಚನ
ಈ ಅನುವಾದದಲ್ಲಿ ಇಲ್ಲ
ಪ್ರತಿವಚನ ಕೀರ್ತನೆ
1ದಾವೀದನ ಕೀರ್ತನೆ, ದೇವಾಲಯದ ಪ್ರತಿಷ್ಠೆಯಲ್ಲಿ ಹಾಡತಕ್ಕದ್ದು. ಯೆಹೋವನೇ, ನನ್ನ ಶತ್ರುಗಳು ಸಂತೋಷಿಸುವುದಕ್ಕೆ ಅವಕಾಶಕೊಡದೆ, ನನ್ನನ್ನು ಉದ್ಧರಿಸಿದ್ದರಿಂದ ನಿನ್ನನ್ನು ಕೊಂಡಾಡುವೆನು. 3ಯೆಹೋವನೇ, ನನ್ನ ಪ್ರಾಣವನ್ನು ಪಾತಾಳದಿಂದಲೂ ಎತ್ತಿದಿಯಲ್ಲಾ; ನನ್ನನ್ನು ಸಮಾಧಿಯಲ್ಲಿ ಸೇರಿಸದೆ ಬದುಕಿಸಿದಿಯಲ್ಲಾ. 4ಯೆಹೋವನ ಭಕ್ತರೇ, ಆತನನ್ನು ಕೀರ್ತಿಸಿರಿ; ಆತನ ಪರಿಶುದ್ಧನಾಮವನ್ನು ಕೊಂಡಾಡಿರಿ. 5ಆತನ ಕೋಪವು ಕ್ಷಣಮಾತ್ರವೇ; ಆತನ ಅನುಗ್ರಹವೋ ಜೀವಮಾನವೆಲ್ಲಾ ಇರುವುದು; ಸಂಜೆಗೆ ದುಃಖವೆಂಬುದು ಬಂದು ನಮ್ಮ ಬಳಿಯಲ್ಲಿ ಇಳಿದುಕೊಂಡರೂ, ಮುಂಜಾನೆ ಹರ್ಷಧ್ವನಿಯು ಕೇಳಿಸುವುದು. 10ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳಿ ಕರುಣಿಸು; ಯೆಹೋವನೇ, ನನ್ನ ಸಹಾಯಕ್ಕೆ ಬಾ” ಎಂದು ಹೇಳಿದೆನು. 11ಆಗ ನೀನು ನನ್ನ ಗೋಳಾಟವನ್ನು ತಪ್ಪಿಸಿ, ಸಂತೋಷದಿಂದ ಕುಣಿದಾಡುವಂತೆ ಮಾಡಿದಿ; ನಾನು ಕಟ್ಟಿಕೊಂಡಿದ್ದ ಗೋಣಿತಟ್ಟನ್ನು ತೆಗೆದುಬಿಟ್ಟು, ಹರ್ಷವಸ್ತ್ರವನ್ನು ನನಗೆ ಧಾರಣೆಮಾಡಿಸಿದಿ. 12ಇದರಿಂದ ಯೆಹೋವನೇ, ನನ್ನ ಮನಸ್ಸು ಎಡೆಬಿಡದೆ ನಿನ್ನನ್ನು ಕೀರ್ತಿಸುತ್ತಿರುವುದು; ನನ್ನ ದೇವರೇ, ನಿನ್ನನ್ನು ಸದಾಕಾಲವೂ ಸ್ತುತಿಸುವೆನು.
ಎರಡನೆಯ ವಾಚನ
7ನೀವು ದೇವರ ಮೇಲಣ ನಂಬಿಕೆಯಲ್ಲಿ, ವಾಕ್ಚಾತುರ್ಯದಲ್ಲಿ, ಜ್ಞಾನದಲ್ಲಿ, ಸಕಲ ವಿಧವಾದ ಆಸಕ್ತಿಯಲ್ಲಿ ಮತ್ತು ನಮ್ಮ ಪ್ರೇರಣೆಯಿಂದ ನಿಮ್ಮಲ್ಲಿ ಹುಟ್ಟಿದ ಪ್ರೀತಿಯಲ್ಲಿ ಹೇಗೆ ಸಮೃದ್ಧರಾಗಿದ್ದೀರೋ ಹಾಗೆಯೇ ಈ ಧರ್ಮಕಾರ್ಯದಲ್ಲಿಯೂ ಸಮೃದ್ಧರಾಗಿ ಮುಂದುವರೆಯಿರಿ. 9ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮಗೆ ಗೊತ್ತಾಗಿದೆಯಲ್ಲಾ; ಆತನು ಐಶ್ವರ್ಯವಂತನಾಗಿದ್ದರೂ ತನ್ನ ಬಡತನದ ಮುಖಾಂತರ ನೀವು ಐಶ್ವರ್ಯವಂತರಾಗಬೇಕೆಂದು ನಿಮಗೋಸ್ಕರ ಆತನು ಬಡವನಾದನು. 13ಇತರರಿಗೆ ಕಷ್ಟಪರಿಹಾರವೂ, ನಿಮಗೆ ಕಷ್ಟವೂ ಉಂಟಾಗಬೇಕೆಂದು ನನ್ನ ತಾತ್ಪರ್ಯವಲ್ಲ; 14ಸಮಾನತ್ವ ಇರಬೇಕೆಂಬುದೇ ನನ್ನ ತಾತ್ಪರ್ಯ. ಸದ್ಯಕ್ಕೆ ನಿಮ್ಮ ಸಮೃದ್ಧಿಯು ಅವರ ಕೊರತೆಯನ್ನು ನೀಗಿಸುತ್ತದೆ. ಮುಂದೆ ಅವರ ಸಮೃದ್ಧಿಯು ನಿಮ್ಮ ಕೊರತೆಯನ್ನು ನೀಗಿಸುವುದಕ್ಕೆ ಅನುಕೂಲವಾಗುವುದು. ಹೀಗೆ ಸಮಾನತ್ವವುಂಟಾಗುವುದು. 15ಧರ್ಮಶಾಸ್ತ್ರದಲ್ಲಿ ಬರೆದಿರುವ ಪ್ರಕಾರ “ಅತಿಯಾಗಿ ಶೇಖರಿಸಿದವನಿಗೆ ಅಧಿಕವಾಗಲಿಲ್ಲ ಮಿತಿಯಾಗಿ ಶೇಖರಿಸಿದವನಿಗೆ ಕೊರತೆಯಾಗಲಿಲ್ಲ.”
ಸುವಾರ್ತೆ
21ಯೇಸು ತಿರುಗಿ ದೋಣಿಯಲ್ಲಿ ಈಚೇದಡಕ್ಕೆ ಬಂದಾಗ ಜನರು ಬಹು ದೊಡ್ಡ ಗುಂಪಾಗಿ ಆತನ ಬಳಿಗೆ ಬಂದರು; ಆತನು ಸಮುದ್ರದ ದಡದಲ್ಲಿದ್ದನು. 22ಆಗ ಸಭಾಮಂದಿರದ ಅಧಿಕಾರಿಗಳಲ್ಲಿ ಒಬ್ಬನಾದ ಯಾಯೀರನೆಂಬವನು ಬಂದು ಯೇಸುವನ್ನು ಕಂಡು ಆತನ ಪಾದಗಳಿಗೆ ಬಿದ್ದು, 23“ನನ್ನ ಚಿಕ್ಕ ಮಗಳು ಈಗ ಸಾವಿನ ಅಂಚಿನಲ್ಲಿದ್ದಾಳೆ; ಆಕೆಯು ಗುಣಹೊಂದಿ ಬದುಕುವಂತೆ ದಯಮಾಡಿ ನೀನು ಬಂದು ಆಕೆಯ ಮೇಲೆ ನಿನ್ನ ಕೈಯಿಡಬೇಕು” ಎಂದು ಆತನನ್ನು ಬಹಳವಾಗಿ ಬೇಡಿಕೊಂಡನು. 24ಯೇಸುವು ಅವನ ಸಂಗಡ ಹೋದನು; ಮತ್ತು ಬಹು ಜನರು ಆತನನ್ನು ನೂಕುತ್ತಾ ಹಿಂಬಾಲಿಸಿದರು. 25ಆಗ ಅಲ್ಲಿ ಹನ್ನೆರಡು ವರ್ಷದಿಂದ ರಕ್ತಕುಸುಮ ರೋಗವಿದ್ದ ಒಬ್ಬ ಹೆಂಗಸು ಇದ್ದಳು. 26ಅನೇಕ ವೈದ್ಯರ ಚಿಕಿತ್ಸೆಯಿಂದ ಆಕೆಯು ಬಹು ಕಷ್ಟವನ್ನು ಅನುಭವಿಸಿ, ಕೈಯಲ್ಲಿದ್ದ ಹಣವನ್ನೆಲ್ಲಾ ವ್ಯಯಮಾಡಿದ್ದರೂ ಅವಳ ರೋಗ ಮಾತ್ರ ಹೆಚ್ಚುತ್ತಾ ಬಂದಿತ್ತೇ ಹೊರತು ಸ್ವಲ್ಪವೂ ಗುಣಮುಖ ಆಗುತ್ತಿರಲಿಲ್ಲ. 27ಆ ಹೆಂಗಸು ಯೇಸುವಿನ ಸಮಾಚಾರವನ್ನು ಕೇಳಿದ್ದರಿಂದ, “ನಾನು ಆತನ ಉಡುಪನ್ನು ಮುಟ್ಟಿದರೆ ಸಾಕು, ಸ್ವಸ್ಥಳಾಗುವೆನು” ಎಂದು ಆಲೋಚಿಸಿ ಗುಂಪಿನಲ್ಲಿ ಹಿಂದಿನಿಂದ ಬಂದು ಆತನ ಉಡುಪನ್ನು ಮುಟ್ಟಿದಳು. 29ಮುಟ್ಟಿದ ಕೂಡಲೆ ಆಕೆಯ ರಕ್ತಸ್ರಾವವು ನಿಂತುಹೋದುದರಿಂದ ಆಕೆಯು, ನನ್ನನ್ನು ಕಾಡಿದ ರೋಗವು ಹೋಗಿ ನನಗೆ ಗುಣವಾಯಿತು ಎಂದು ತನ್ನ ಮನಸ್ಸಿನಲ್ಲಿ ತಿಳಿದುಕೊಂಡಳು. 30ಆ ಕ್ಷಣವೇ ಯೇಸು ತನ್ನಿಂದ ಶಕ್ತಿಯು ಹೊರಟಿತೆಂದು ತನ್ನಲ್ಲಿ ತಿಳಿದುಕೊಂಡು ಗುಂಪಿನಲ್ಲಿ ಹಿಂತಿರುಗಿ, “ನನ್ನ ಉಡುಪನ್ನು ಮುಟ್ಟಿದವರು ಯಾರು?” ಎಂದು ಕೇಳಲು 31ಆತನ ಶಿಷ್ಯರು ಆತನಿಗೆ, “ನಿನ್ನ ಸುತ್ತಲೂ ಜನರು ಮುತ್ತಿಕೊಂಡು ನೂಕುವುದು ನಿನಗೆ ತಿಳಿದೇ ಇದೆ. ಆದರೂ ‘ನನ್ನನ್ನು ಮುಟ್ಟಿದವರು ಯಾರು’ ಎಂದು ಕೇಳುತ್ತೀಯಲ್ಲಾ?” ಎಂದರು. 32ಆದರೆ ಯೇಸು ಈ ಕೆಲಸ ಮಾಡಿದವರನ್ನು ನೋಡಬೇಕೆಂದು ಸುತ್ತಲು ನೋಡುತ್ತಾ ಇರಲಾಗಿ, 33ಆ ಮಹಿಳೆ ತನಗೆ ಸಂಭವಿಸಿದ್ದನ್ನು ಗ್ರಹಿಸಿ, ಭಯದಿಂದ ನಡುಗುತ್ತಾ ಬಂದು ಆತನಿಗೆ ಅಡ್ಡಬಿದ್ದು ನಡೆದ ಸಂಗತಿಯನ್ನೆಲ್ಲಾ ತಿಳಿಸಿದಳು. 34ಆತನು ಆಕೆಗೆ, “ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು; ನಿನ್ನ ರೋಗದಿಂದ ನೀನು ಸ್ವಸ್ಥಳಾಗಿರುವೆ” ಎಂದು ಹೇಳಿದನು. 35ಆತನು ಇನ್ನೂ ಮಾತನಾಡುತ್ತಿರುವಾಗಲೇ ಸಭಾಮಂದಿರದ ಅಧಿಕಾರಿಯ ಕಡೆಯವರು ಬಂದು, “ನಿನ್ನ ಮಗಳು ತೀರಿಹೋದಳು; ಇನ್ನೇಕೆ ಗುರುವಿಗೆ ತೊಂದರೆ ಕೊಡುವಿ?” ಅಂದರು. 36ಅವರು ಆಡಿದ ಮಾತನ್ನು ಯೇಸು ಗಣನೆಗೆ ತಂದುಕೊಳ್ಳದೆ ಸಭಾಮಂದಿರದ ಅಧಿಕಾರಿಗೆ, “ಅಂಜಬೇಡ, ನಂಬಿಕೆ ಮಾತ್ರ ಇರಲಿ” ಎಂದು ಹೇಳಿದನು. 37ಮತ್ತು ಆತನು ಪೇತ್ರ, ಯಾಕೋಬ, ಮತ್ತು ಯಾಕೋಬನ ತಮ್ಮನಾದ ಯೋಹಾನ ಇವರನ್ನೇ ಹೊರತು ಬೇರೆ ಯಾರನ್ನೂ ತನ್ನೊಂದಿಗೆ ಬರುವುದಕ್ಕೆ ಅನುಮತಿಸಲಿಲ್ಲ. 38ಅವರು ಆ ಸಭಾಮಂದಿರದ ಅಧಿಕಾರಿಯ ಮನೆಗೆ ಬಂದಾಗ ಅಲ್ಲಿ ಜನರ ಗದ್ದಲವನ್ನೂ ಕೆಲವರು ಅಳುವುದನ್ನೂ ಗೋಳಾಡುವುದನ್ನೂ ಆತನು ಕಂಡನು. 39ಆತನು ಒಳಕ್ಕೆ ಹೋಗಿ, “ನೀವು ಗದ್ದಲ ಮಾಡುವುದೂ ಅಳುವುದೂ ಯಾಕೆ? ಹುಡುಗಿ ಸತ್ತಿಲ್ಲ; ಅವಳು ನಿದ್ದೆಮಾಡುತ್ತಿದ್ದಾಳೆ” ಅನ್ನಲು, 40ಅವರು ಆತನನ್ನು ಪರಿಹಾಸ್ಯಮಾಡಿದರು. ಆದರೆ ಆತನು ಎಲ್ಲರನ್ನು ಹೊರಕ್ಕೆ ಕಳುಹಿಸಿ ಆ ಹುಡುಗಿಯ ತಂದೆತಾಯಿಗಳನ್ನೂ ತನ್ನೊಂದಿಗಿದ್ದವರನ್ನೂ ಹುಡುಗಿಯಿದ್ದಲ್ಲಿಗೆ ಕರೆದುಕೊಂಡು ಹೋಗಿ, 41ಅವಳ ಕೈಹಿಡಿದು, “ತಲಿಥಾಕೂಮ್” ಅಂದನು. ಈ ಮಾತಿಗೆ “ಅಮ್ಮಣ್ಣೀ, ಎದ್ದೇಳು ಎಂದು ನಾನು ಹೇಳುತ್ತೇನೆ” ಎಂದರ್ಥ. 42ಕೂಡಲೆ ಆ ಹುಡುಗಿ ಎದ್ದು ನಡೆದಾಡಿದಳು; ಆಕೆಯು ಹನ್ನೆರಡು ವರ್ಷ ವಯಸ್ಸಿನವಳು. 43ಅವರೆಲ್ಲರೂ ಬಹಳ ಆಶ್ಚರ್ಯದಿಂದ ಬೆರಗಾದರು. ಆ ಮೇಲೆ ಆತನು ಅವರಿಗೆ, ಇದು ಯಾರಿಗೂ ತಿಳಿಯಬಾರದೆಂದು ಕಟ್ಟಪ್ಪಣೆ ಮಾಡಿದನು. ಆ ಹುಡುಗಿಗೆ ಊಟ ಮಾಡಲು ಏನಾದರೂ ಕೊಡಿರಿ ಎಂದು ಹೇಳಿದನು.
ಇಂದಿನ ಸಂತರು
- ಅಲೆಕ್ಸಾಂಡ್ರಿಯಾದ ಸಂತ ಸಿರಿಲ್, ಧರ್ಮಾಧ್ಯಕ್ಷ ಮತ್ತು ಧರ್ಮಸಭೆಯ ಪಂಡಿತ
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು