Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜೂನ್ 2027 › 16 ಜೂನ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 16 ಜೂನ್ 2027

ಬುಧವಾರ · ಸಾಮಾನ್ಯ ಕಾಲದ 11ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 11ನೇ ವಾರದ ಬುಧವಾರ

ವಾರದ ದಿನ · ಆರಾಧನಾ ಬಣ್ಣ: ಹಸಿರು

ದಿನದ ವಾಚನಗಳು

ಮೊದಲನೆಯ ವಾಚನ

2 ಕೊರಿ 9:6–11

6ಆದರೆ ಮಿತವಾಗಿ ಬಿತ್ತುವವನು ಮಿತವಾಗಿ ಕೊಯ್ಯುವನು. ಹೇರಳವಾಗಿ ಬಿತ್ತುವವನು ಹೇರಳವಾಗಿ ಕೊಯ್ಯುತ್ತಾನೆ. ಇದು ನಿಮಗೆ ತಿಳಿದಿರಲಿ. 7ಪ್ರತಿಯೊಬ್ಬನೂ ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲವಂತದಿಂದಾಗಲಿ ಯಾರೂ ಕೊಡಬಾರದು; ಯಾಕೆಂದರೆ ಸಂತೋಷವಾಗಿ ಕೊಡುವವನನ್ನು ದೇವರು ಪ್ರೀತಿಸುವನು. 8ದೇವರು ಸಕಲ ವಿಧವಾದ ದಾನಗಳನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವುದಕ್ಕೆ ಶಕ್ತನಾದ್ದರಿಂದ, ನೀವೂ ಯಾವಾಗಲೂ ಎಲ್ಲಾ ವಿಷಯಗಳಲ್ಲಿ ಪರಿಪೂರ್ಣತೆಯುಳ್ಳವರಾಗಿ ಸಕಲ ಸತ್ಕಾರ್ಯಗಳನ್ನು ಹೇರಳವಾಗಿ ಮಾಡುವವರಾಗಿರಬೇಕು. 9“ಅವನು ಬಡವರಿಗೆ ಧಾರಾಳವಾಗಿ ನೀಡುವನು; ಅವನ ನೀತಿಯು ಸದಾಕಾಲವೂ ಇರುವುದು.” 10ಬಿತ್ತುವವನಿಗೆ ಬೀಜವನ್ನೂ, ತಿನ್ನುವವನಿಗೆ ಆಹಾರವನ್ನು ಕೊಡುವಾತನು ನಿಮಗೂ ಬಿತ್ತುವುದಕ್ಕೆ ಬೀಜವನ್ನು ಕೊಟ್ಟು ಅದನ್ನು ಹೆಚ್ಚಿಸಿ ನಿಮ್ಮ ಧರ್ಮಕಾರ್ಯಗಳಿಂದಾಗುವ ಫಲಗಳನ್ನು ವೃದ್ಧಿಪಡಿಸುವನು. 11ಹೀಗೆ ನೀವು ಎಲ್ಲಾ ವಿಷಯಗಳಲ್ಲಿ ಐಶ್ವರ್ಯವಂತರಾಗಿದ್ದು ಉದಾರವಾಗಿ ಕೊಡಲು ಶಕ್ತರಾಗುವಿರಿ; ಇದಲ್ಲದೆ ನಿಮ್ಮ ದಾನಗಳು ನಮ್ಮ ಕೈಯಿಂದ ಮತ್ತೊಬ್ಬರಿಗೆ ಸೇರಿದಾಗ ಅದು ದೇವರಿಗೆ ಕೃತಜ್ಞತಾಸ್ತುತಿಯನ್ನು ಉಂಟುಮಾಡುತ್ತದೆ.

ಪ್ರತಿವಚನ ಕೀರ್ತನೆ

ಕೀರ್ತ 112:1–4, 9

1ಯೆಹೋವನಿಗೆ ಸ್ತೋತ್ರ! ಯಾರು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ, ಆತನ ಆಜ್ಞೆಗಳಲ್ಲಿ ಅತ್ಯಾನಂದಪಡುವನೋ ಅವನೇ ಧನ್ಯನು. 2ಅವನ ಸಂತಾನವು ಲೋಕದಲ್ಲಿ ಬಲಿಷ್ಠವಾಗುವುದು; ನೀತಿವಂತನ ವಂಶವು ಶುಭಹೊಂದುವುದು. 3ಅವನ ಮನೆಯಲ್ಲಿ ಸಿರಿಸಂಪತ್ತುಗಳು ಇರುವವು; ಅವನ ನೀತಿಯು ಸದಾಕಾಲವೂ ಫಲಿಸುತ್ತಿರುವುದು. 4ಯಥಾರ್ಥರಿಗೆ ಕತ್ತಲೆಯಲ್ಲಿಯೂ ಜ್ಯೋತಿ ಮೂಡುವುದು; ದಯೆಯೂ, ಕನಿಕರವೂ, ನೀತಿಯುಳ್ಳ ದೇವರೇ ಆ ಜ್ಯೋತಿ. 9ಬಡವರಿಗೆ ಉದಾರವಾಗಿ ಕೊಡುತ್ತಾನೆ; ಅವನ ನೀತಿಯ ಫಲವು ಸದಾಕಾಲವೂ ಇರುವುದು. ಮಹಿಮೆಯೊಡನೆ ಅವನ ಕೊಂಬು ಎತ್ತಲ್ಪಡುವುದು.

ಸುವಾರ್ತೆ

ಮತ್ತಾ 6:1–6, 16–18

1“ಜನರು ನೋಡಲಿ ಎಂದು ನಿಮ್ಮ ‘ಧರ್ಮಕಾರ್ಯಗಳನ್ನು’ ಅವರ ಮುಂದೆ ಮಾಡಬಾರದು; ಹಾಗೆ ಮಾಡಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯ ಹತ್ತಿರ ನಿಮಗೆ ಫಲದೊರೆಯುವುದಿಲ್ಲ. 2“ಆದುದರಿಂದ ನೀನು ದಾನಕೊಡುವಾಗ ಅದನ್ನು ಪ್ರಚಾರಪಡಿಸಬೇಡ; ಜನರಿಂದ ಹೊಗಳಿಸಿಕೊಳ್ಳಬೇಕೆಂದು ಕಪಟಿಗಳು ಸಭಾಮಂದಿರಗಳಲ್ಲಿಯೂ ಬೀದಿಗಳಲ್ಲಿಯೂ ಹಾಗೆ ಮಾಡುತ್ತಾರೆ. ಅವರು ತಮಗೆ ಬರತಕ್ಕ ಫಲವನ್ನು ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 3ಆದರೆ ನೀನು ದಾನ ಕೊಡುವಾಗ ನಿನ್ನ ಬಲಗೈ ದಾನಕೊಟ್ಟದ್ದು ಎಡಗೈಗೂ ತಿಳಿಯದಿರಲಿ. 4ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆಯು ನಿನಗೆ ಫಲಕೊಡುವನು. 5“ನೀವು ಪ್ರಾರ್ಥನೆಮಾಡುವಾಗ ಕಪಟಿಗಳ ಹಾಗೆ ಮಾಡಬೇಡಿರಿ. ಜನರು ನೋಡಬೇಕೆಂದು ಅವರು ಸಭಾಮಂದಿರಗಳಲ್ಲಿಯೂ ಬೀದಿಚೌಕಗಳಲ್ಲಿಯೂ ನಿಂತುಕೊಂಡು ಪ್ರಾರ್ಥನೆಮಾಡುವುದಕ್ಕೆ ಇಷ್ಟಪಡುತ್ತಾರೆ. ಅವರು ತಮಗೆ ಬರತಕ್ಕ ಫಲವನ್ನು ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 6ನೀನು ಪ್ರಾರ್ಥನೆಮಾಡುವಾಗ ನಿನ್ನ ಕೋಣೆಯೊಳಗೆ ಹೋಗಿ ಬಾಗಿಲನ್ನು ಮುಚ್ಚಿಕೊಂಡು ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆಮಾಡು. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆಯು ನಿನಗೆ ಫಲಕೊಡುವನು. 16“ಇದಲ್ಲದೆ ನೀವು ಉಪವಾಸಮಾಡುವಾಗ ಕಪಟಿಗಳಂತೆ ಮುಖವನ್ನು ಸಪ್ಪಗೆ ಮಾಡಿಕೊಳ್ಳಬೇಡಿರಿ. ಅವರು ತಾವು ಉಪವಾಸಿಗಳೆಂದು ಜನರಿಗೆ ತೋರಿಬರುವಂತೆ ತಮ್ಮ ಮುಖವನ್ನು ವಿಕಾರಮಾಡಿಕೊಳ್ಳುತ್ತಾರೆ. ಅವರು ತಮಗೆ ಬರತಕ್ಕ ಫಲವನ್ನು ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 17ಆದರೆ ನೀನು ಉಪವಾಸಮಾಡುವಾಗ ತಲೆಗೆ ಎಣ್ಣೆ ಹಚ್ಚಿಕೊಂಡು ಮುಖವನ್ನು ತೊಳೆದುಕೋ. 18ಹೀಗೆ ಮಾಡಿದರೆ ನೀನು ಉಪವಾಸಿಯೆಂದು ಜನರಿಗೆ ಕಾಣದೆ ಹೋದಾಗ್ಯೂ ಅಂತರಂಗದಲ್ಲಿರುವ ನಿನ್ನ ತಂದೆಗೆ ಉಪವಾಸಿಯೆಂದು ಕಾಣಿಸಿಕೊಳ್ಳುವಿ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆಯು ನಿನಗೆ ಪ್ರತಿಫಲಕೊಡುವನು.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು