ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜನವರಿ 2027 › 19 ಜನವರಿ
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 19 ಜನವರಿ 2027
ಮಂಗಳವಾರ · ಸಾಮಾನ್ಯ ಕಾಲದ ಎರಡನೆಯ ವಾರ
ಹಬ್ಬಗಳು ಮತ್ತು ಸಂತರು
ಸಾಮಾನ್ಯ ಕಾಲದ ಎರಡನೆಯ ವಾರದ ಮಂಗಳವಾರ
ವಾರದ ದಿನ · ಆರಾಧನಾ ಬಣ್ಣ: ಹಸಿರು
ದಿನದ ವಾಚನಗಳು
ಮೊದಲನೆಯ ವಾಚನ
10ನೀವು ದೇವಜನರಿಗೆ ಉಪಚಾರ ಮಾಡಿದ್ದೀರಿ, ಇನ್ನೂ ಮಾಡುತ್ತಾ ಇದ್ದಿರಿ. ಈ ಕೆಲಸವನ್ನು ಮತ್ತು ಇದರಲ್ಲಿ ನೀವು ಆತನ ನಾಮದ ಕಡೆಗೆ ತೋರಿಸಿದ ಪ್ರೀತಿಯನ್ನು ಆತನು ಮರೆಯುವುದಿಲ್ಲ, ಯಾಕೆಂದರೆ ದೇವರು ಅನೀತಿಯುಳ್ಳವನಲ್ಲ. 11ನಿರೀಕ್ಷೆಯ ಸಂಪೂರ್ಣ ನಿಶ್ಚಯತ್ವವನ್ನು ಹೊಂದುವುದಕ್ಕಾಗಿ ಅಂತ್ಯದವರೆಗೂ ನೀವು ಅದೇ ಶ್ರದ್ಧೆಯನ್ನು ತೋರಿಸಬೇಕೆಂದು ನಾನು ಬಹಳವಾಗಿ ಅಪೇಕ್ಷಿಸುತ್ತೇವೆ. 12ನೀವು ಸೋಮಾರಿಗಳಾಗಿರಬೇಕೆಂದು ಅಪೇಕ್ಷಿಸುವುದಿಲ್ಲ, ಬದಲಿಗೆ ನಂಬಿಕೆಯಿಂದಲೂ, ತಾಳ್ಮೆಯಿಂದಲೂ, ವಾಗ್ದಾನಗಳನ್ನು ಬಾಧ್ಯವಾಗಿ ಹೊಂದುವವರನ್ನು ಅನುಸರಿಸುವವರಾಗಬೇಕೆಂದು ಕೋರುತ್ತೇನೆ. 13ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದಾಗ ತನಗಿಂತಲೂ ಹೆಚ್ಚಿನವರು ಯಾರೂ ಇಲ್ಲದ್ದರಿಂದ ತನ್ನ ಮೇಲೆ ಆಣೆಯಿಟ್ಟು, 14“ಖಂಡಿತವಾಗಿಯೂ ನಾನು ನಿನ್ನನ್ನು ಆಶೀರ್ವದಿಸುವೆನು. ನಿನ್ನ ಸಂತಾನವನ್ನು ಅಭಿವೃದ್ಧಿಪಡಿಸುವೆನು” ಎಂದು ಹೇಳಿದನಷ್ಟೆ. 15ಹೀಗೆ ಅಬ್ರಹಾಮನು ತಾಳ್ಮೆಯಿಂದ ಕಾದುಕೊಂಡಿದ್ದು ವಾಗ್ದಾನವನ್ನು ಪಡೆದುಕೊಂಡನು. 16ಮನುಷ್ಯರು ತಮಗಿಂತಲೂ ಹೆಚ್ಚಿನವನ ಮೇಲೆ ಆಣೆಯಿಡುತ್ತಾರಷ್ಟೆ, ಆಣೆಯನ್ನು ದೃಢಪಡಿಸಿದ ಮೇಲೆ ವಿವಾದವು ಅಂತ್ಯವಾಗುವುದು. 17ಹಾಗೆಯೇ ದೇವರು ತನ್ನ ಸಂಕಲ್ಪವು ಬದಲಾಗಲಾರದ್ದೆಂಬುದನ್ನು, ವಾಗ್ದಾನದ ಬಾಧ್ಯಸ್ಥರಿಗೆ ಬಹು ಸ್ಪಷ್ಟವಾಗಿ ತೋರಿಸಬೇಕೆಂದು ಆಣೆಯಿಟ್ಟು ಸ್ಥಿರಪಡಿಸಿದನು. 18ದೇವರ ವಾಗ್ದಾನ ಮತ್ತು ಆಣೆ ಇವೆರಡೂ ನಿಶ್ಚಲವಾದ ಆಧಾರಗಳು ಏಕೆಂದರೆ ದೇವರು ಸುಳ್ಳಾಡುವವನಲ್ಲ. ಅದುದರಿಂದ ಆಶ್ರಯವನ್ನು ಹೊಂದಬೇಕೆಂದು ಓಡಿಬಂದು, ನಮ್ಮ ಮುಂದೆ ಇಟ್ಟಿರುವ ನಿರೀಕ್ಷೆಯನ್ನು ಹಿಡಿದುಕೊಂಡವರಾದ ನಮಗೆ ಬಲವಾದ ಪ್ರೋತ್ಸಾಹ ಉಂಟಾಯಿತು. 19ಆ ನಿರೀಕ್ಷೆಯು ನಮ್ಮ ಪ್ರಾಣಕ್ಕೆ ವಿಶ್ವಾಸಾರ್ಹವಾದದ್ದೂ ಸ್ಥಿರವಾದದ್ದೂ ಆದ ಲಂಗರವಾಗಿದೆ. ಅದು ಅತಿ ಪರಿಶುದ್ಧ ಸ್ಥಳದ ತೆರೆಯ ಒಳಗಡೆ ಪ್ರವೇಶಿಸುವಂಥದ್ದಾಗಿದೆ. 20ಅಲ್ಲಿಗೆ ಯೇಸು ಸದಾಕಾಲವೂ ಮೆಲ್ಕಿಜೆದೇಕನ ತರಹದ ಮಹಾಯಾಜಕನಾಗಿ, ನಮಗೋಸ್ಕರ ಮುಂಚಿತವಾಗಿಯೇ ಹೋಗಿ ಆ ಸಾನ್ನಿಧ್ಯವನ್ನು ಪ್ರವೇಶಿಸಿದ್ದಾನೆ.
ಪ್ರತಿವಚನ ಕೀರ್ತನೆ
1ಯೆಹೋವನಿಗೆ ಸ್ತೋತ್ರ! ನಾನು ಯೆಹೋವನನ್ನು ಕೊಂಡಾಡುವೆನು; ಯಥಾರ್ಥರ ಕೂಟದಲ್ಲಿಯೂ, ನೆರೆದ ಸಭೆಯಲ್ಲಿಯೂ, ಮನಃಪೂರ್ವಕವಾಗಿ ಕೀರ್ತಿಸುವೆನು. 2ಯೆಹೋವನ ಕೃತ್ಯಗಳು ಮಹತ್ತಾದವುಗಳು; ಅವುಗಳಲ್ಲಿ ಸಂತೋಷಿಸುವವರು ಅವುಗಳನ್ನೇ ಧ್ಯಾನಿಸುವರು. 4ಆತನು ತನ್ನ ಅದ್ಭುತಕೃತ್ಯಗಳ ಜ್ಞಾಪಕವನ್ನು ಉಳಿಯಮಾಡಿದ್ದಾನೆ. ಯೆಹೋವನು ಕೃಪೆಯೂ, ಕನಿಕರವೂ ಉಳ್ಳವನು. 5ತನ್ನಲ್ಲಿ ಭಯಭಕ್ತಿಯುಳ್ಳವರಿಗೆ ಆಹಾರವನ್ನು ಕೊಟ್ಟಿದ್ದಾನೆ; ತನ್ನ ಒಡಂಬಡಿಕೆಯನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಂಡಿದ್ದಾನೆ 9ಯೆಹೋವನು ತನ್ನ ಜನರಿಗೆ ವಿಮೋಚನೆಯನ್ನು ಉಂಟುಮಾಡಿದ್ದಾನೆ; ತನ್ನ ಒಡಂಬಡಿಕೆಯನ್ನು ನಿತ್ಯಕ್ಕೂ ಸ್ಥಾಪಿಸಿದ್ದಾನೆ; ಆತನ ನಾಮವು ಪರಿಶುದ್ಧವೂ, ಮಹೋನ್ನತವೂ ಆಗಿದೆ. 10ಯೆಹೋವನ ಭಯವೇ ಜ್ಞಾನಕ್ಕೆ ಮೂಲ; ಆತನ ಕಟ್ಟಳೆಗಳನ್ನು ಕೈಕೊಳ್ಳುವವರು ಪೂರ್ಣ ವಿವೇಕಿಗಳು. ಆತನ ಸ್ತುತಿಯು ನಿರಂತರವಾದದ್ದು.
ಸುವಾರ್ತೆ
23ಯೇಸು ಸಬ್ಬತ್ ದಿನದಲ್ಲಿ ಪೈರಿನ ಹೊಲಗಳನ್ನು ಹಾದುಹೋಗುತ್ತಿರುವಾಗ, ಆತನ ಶಿಷ್ಯರು ತೆನೆಗಳನ್ನು ಮುರಿದು ತಿಂದರು. 24ಫರಿಸಾಯರು ಆತನನ್ನು, “ನೋಡು, ಇವರು ಸಬ್ಬತ್ ದಿನದಲ್ಲಿ ಧರ್ಮಸಮ್ಮತವಲ್ಲದ್ದನ್ನು ಏಕೆ ಮಾಡುತ್ತಾರೆ?” ಎಂದು ಕೇಳಿದರು. 25ಆಗ ಯೇಸು ಅವರಿಗೆ, “ದಾವೀದನು ತಾನೂ ತನ್ನ ಸಂಗಡ ಇದ್ದವರೂ ಆಹಾರವಿಲ್ಲದೆ ಹಸಿದಾಗ ಏನು ಮಾಡಿದನೆಂಬುದನ್ನು ನೀವು ಎಂದಾದರೂ ಓದಲಿಲ್ಲವೋ? 26ಅವನು ಮಹಾಯಾಜಕನಾದ ಅಬಿಯಾತರನ ಕಾಲದಲ್ಲಿ ದೇವಮಂದಿರದೊಳಕ್ಕೆ ಹೋಗಿ ಯಾಜಕರು ಹೊರತು ಮತ್ತಾರೂ ತಿನ್ನಬಾರದ ನೈವೇದ್ಯದ ರೊಟ್ಟಿಗಳನ್ನು ತಾನು ತಿಂದು ತನ್ನ ಸಂಗಡ ಇದ್ದವರಿಗೂ ಕೊಟ್ಟನಲ್ಲಾ?” ಎಂದು ನುಡಿಯುತ್ತಾ, 27“ಸಬ್ಬತ್ ದಿನವು ಮನುಷ್ಯರಿಗೋಸ್ಕರ ಮಾಡಲಾಯಿತೇ ಹೊರತು ಮನುಷ್ಯರನ್ನು ಸಬ್ಬತ್ ದಿನಕ್ಕಾಗಿ ಮಾಡಲಿಲ್ಲ. 28ಹೀಗಿರಲಾಗಿ ಮನುಷ್ಯಕುಮಾರನು ಸಬ್ಬತ್ ದಿನಕ್ಕೂ ಒಡೆಯನಾಗಿದ್ದಾನೆ” ಎಂದು ಯೇಸು ಹೇಳಿದನು.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು