ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಅಕ್ಟೋಬರ್ 2026 › 16 ಅಕ್ಟೋಬರ್
ಆರ್ಥೊಡಾಕ್ಸ್ ಪಂಚಾಂಗ · ಅಕ್ಟೋಬರ್ 3 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 16 ಅಕ್ಟೋಬರ್ 2026
ಶುಕ್ರವಾರ · ಪಂಚಾಶತ್ತಮದ ನಂತರದ 20ನೇ ವಾರ · ಸ್ವರ 2
ಹಬ್ಬಗಳು ಮತ್ತು ಸಂತರು
Hieromartyr Dionysius the Areopagite, Bishop of Athens († 96)
ಉಪವಾಸದ ದಿನ
ಉಪವಾಸ: ಎಣ್ಣೆಯೊಂದಿಗೆ
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಪತ್ರಿಕೆ
8ಇಷ್ಟೇ ಅಲ್ಲದೆ, ನನ್ನ ಕರ್ತನಾದ ಕ್ರಿಸ್ತಯೇಸುವನ್ನರಿಯುವುದೇ ಅತಿ ಶ್ರೇಷ್ಠವಾದದ್ದೆಂದು ತಿಳಿದು ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ಆತನ ನಿಮಿತ್ತ ನಾನು ಎಲ್ಲವನ್ನೂ ಕಳೆದುಕೊಂಡು ಅವುಗಳನ್ನು ಕಸವೆಂದೆಣಿಸುತ್ತೇನೆ. 9ಇದರಲ್ಲಿ ನನ್ನ ಉದ್ದೇಶವೇನೆಂದರೆ, ನಾನು ಕ್ರಿಸ್ತನನ್ನು ಸಂಪಾದಿಸಿಕೊಂಡು, ಧರ್ಮಶಾಸ್ತ್ರದ ಫಲವಾಗಿರುವ ಸ್ವನೀತಿಯನ್ನಲ್ಲ, ಕ್ರಿಸ್ತನನ್ನು ನಂಬುವುದರಿಂದ ದೊರಕುವಂಥ ಅಂದರೆ ಕ್ರಿಸ್ತನ ಮೇಲಣ ನಂಬಿಕೆಯ ಆಧಾರದಿಂದ ದೇವರು ಕೊಡುವಂಥ ನೀತಿಯನ್ನೇ ಹೊಂದಿ ಕ್ರಿಸ್ತನಲ್ಲಿರುವವನಾಗಿರಬೇಕೆಂಬುದೇ. 10ಆತನನ್ನೂ ಆತನ ಪುನರುತ್ಥಾನದಲ್ಲಿರುವ ಶಕ್ತಿಯನ್ನೂ, ಆತನ ಬಾಧೆಗಳಲ್ಲಿ ಪಾಲುಗಾರನಾಗಿರುವ ಪದವಿಯನ್ನೂ ತಿಳಿದುಕೊಂಡು ಆತನ ಮರಣದ ವಿಷಯದಲ್ಲಿ ಆತನಂತೆ ರೂಪಾಂತರಗೊಳ್ಳಬೇಕೆಂಬುದೇ ನನ್ನ ಬಯಕೆಯಾಗಿದೆ. 11ಹೀಗಾದರೆ ಸತ್ತವರಲ್ಲಿ ಕೆಲವರಿಗೆ ಆಗುವ ಪುನರುತ್ಥಾನದ ಅನುಭವ ನನಗೂ ಆದೀತು. 12ಇಷ್ಟರೊಳಗೆ ನಾನಿದೆಲ್ಲವನ್ನೂ ಪಡಕೊಂಡು ಪರಿಪೂರ್ಣತೆಗೆ ಬಂದವನೆಂದು ಹೇಳುವುದಿಲ್ಲ. ಆದರೆ ನಾನು ಯಾವುದನ್ನು ಹೊಂದುವುದಕ್ಕಾಗಿ ಕ್ರಿಸ್ತ ಯೇಸುವು ನನ್ನನ್ನು ಹಿಡಿದುಕೊಂಡನೋ ಅದನ್ನು ಹೊಂದುವುದಕ್ಕೋಸ್ಕರ ಪ್ರಯತ್ನಿಸುತ್ತಾ ಇದ್ದೇನೆ. 13ಸಹೋದರರೇ, ನಾನಂತೂ ಪಡೆದುಕೊಂಡವನೆಂದು ನನ್ನನ್ನು ಈ ವರೆಗೂ ಎಣಿಸಿಕೊಳ್ಳುವುದಿಲ್ಲ. ಆದರೆ ಒಂದು, ನಾನು ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವುದಕ್ಕಾಗಿ ಎದೆಬೊಗ್ಗಿದವನಾಗಿ, 14ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಹೊಂದುವ ಗುರಿಯನ್ನು ತಲುಪಲೆಂದು ಓಡುತ್ತಾ ಇದ್ದೇನೆ. 15ನಮ್ಮಲ್ಲಿ ಪ್ರವೀಣರಾದವರೆಲ್ಲರೂ ಈ ವಿಷಯದಲ್ಲಿ ಇದೇ ಅಭಿಪ್ರಾಯವುಳ್ಳವರಾಗಿರಿ. ಮತ್ತು ಯಾವುದಾದರೂ ಒಂದು ವಿಷಯದಲ್ಲಿ ನೀವು ಬೇರೆ ಅಭಿಪ್ರಾಯವುಳ್ಳವರಾಗಿದ್ದರೆ ಅದನ್ನು ದೇವರು ನಿಮಗೆ ತೋರಿಸಿಕೊಡುವನು. 16ಅಂತೂ, ನಾವು ಯಾವ ಸೂತ್ರವನ್ನನುಸರಿಸಿ ಇಲ್ಲಿಯ ವರೆಗೆ ಬಂದೆವೋ ಅದನ್ನೇ ಅನುಸರಿಸಿ ನಡೆಯೋಣ. 17ಸಹೋದರರೇ, ನೀವೆಲ್ಲರು ನನ್ನೊಂದಿಗೆ ಸೇರಿ ನನ್ನನ್ನು ಅನುಸರಿಸುವವರಾಗಿರಿ ಮತ್ತು ನಾವು ತೋರಿಸಿದ ಮಾದರಿಯ ಪ್ರಕಾರ ನಡೆದುಕೊಳ್ಳುವವರನ್ನು ಲಕ್ಷ್ಯಕ್ಕೆ ತಂದುಕೊಳ್ಳಿರಿ. 18ಯಾಕೆಂದರೆ ಅನೇಕರು ಕ್ರಿಸ್ತನ ಶಿಲುಬೆಗೆ ವಿರೋಧಿಗಳಾಗಿ ನಡೆಯುತ್ತಾರೆ. ಅವರ ವಿಷಯದಲ್ಲಿ ನಿಮಗೆ ಎಷ್ಟೋ ಸಾರಿ ಹೇಳಿದೆನು, ಈಗಲೂ ಅಳುತ್ತಾ ಹೇಳುತ್ತೇನೆ. 19ನಾಶನವೇ ಅವರ ಅಂತ್ಯಾವಸ್ಥೆ, ಹೊಟ್ಟೆಯೇ ಅವರ ದೇವರು, ನಾಚಿಕೆಪಡಿಸುವ ಕೆಲಸಗಳಲ್ಲಿಯೇ ಅವರಿಗೆ ಘನತೆ, ಅವರು ಪ್ರಪಂಚದ ಕಾರ್ಯಗಳ ಕುರಿತು ಚಿಂತಿಸುವವರು.
ಪತ್ರಿಕೆ (ಅರಿಯೊಪಾಗದ ಸಂತ ದಿಯೊನುಸ್ಯ)
16ಪೌಲನು ಅವರಿಗೋಸ್ಕರ ಅಥೇನೆಯಲ್ಲಿ ಕಾದುಕೊಂಡಿರುವಾಗ ಆ ಪಟ್ಟಣದಲ್ಲಿ ಎಲ್ಲೆಲ್ಲಿಯೂ ವಿಗ್ರಹಗಳೇ ಇರುವುದನ್ನು ನೋಡಿ ಅವನ ಆತ್ಮವು ಕುದಿಯಿತು. 17ಆದುದರಿಂದ ಅವನು ಸಭಾಮಂದಿರದಲ್ಲಿ ಯೆಹೂದ್ಯರ ಮತ್ತು ಯೆಹೂದ್ಯ ಮತಾವಲಂಬಿಗಳೊಂದಿಗೆ ಮತ್ತು ಪ್ರತಿದಿನ ಪೇಟೆಯಲ್ಲಿ ಕಂಡುಬಂದವರ ಸಂಗಡಲೂ ಚರ್ಚಿಸಿದನು. 18ಇದಲ್ಲದೆ ಎಪಿಕೂರಿಯನ್ನರು, ಸ್ತೋಯಿಕರು ಎಂಬ ತತ್ವವಿಚಾರಕರಲ್ಲಿ ಕೆಲವರು ಅವನ ಸಂಗಡ ಚರ್ಚೆಮಾಡಿದರು. ಅವರಲ್ಲಿ ಕೆಲವರು; “ಈ ವಾಚಾಳಿ ಏನು ಹೇಳ ಬೇಕೆಂದಿದ್ದಾನೆ?” ಅಂದರು. ಅವನು ಯೇಸುವಿನ ವಿಷಯವಾಗಿ ಮತ್ತು ಸತ್ತವರು ಎದ್ದು ಬರುವರೆಂಬುದರ ಕುರಿತು ಸಾರುತ್ತಿದ್ದುದರಿಂದ; “ಇವನು ಅನ್ಯದೇಶದ ದೇವರುಗಳನ್ನು ಪ್ರಚಾರಮಾಡುವವನಾಗಿ ಕಂಡುಬರುತ್ತಾನೆಂದು” ಬೇರೆ ಕೆಲವರು ಹೇಳಿದರು. 19ಅವರು ಅವನನ್ನು ಹಿಡಿದು ಅರಿಯೊಪಾಗಕ್ಕೆ ಕರೆದುಕೊಂಡು ಹೋಗಿ; “ನೀನು ಹೇಳುವ ಈ ಹೊಸ ಉಪದೇಶವನ್ನು ನಾವು ತಿಳಿದುಕೊಳ್ಳಬಹುದೇ? 20ಅಪೂರ್ವವಾದ ಸಂಗತಿಗಳನ್ನು ನಮಗೆ ತಿಳಿಸುತ್ತಿದ್ದೀಯಲ್ಲಾ; ಆದಕಾರಣ ಅದೇನು ಎಂಬುದರ ಕುರಿತು ತಿಳಿಯಬೇಕೆಂದು ನಮಗೆ ಅಪೇಕ್ಷೆಯಿದೆ” ಅಂದರು. 21ಅಥೇನೆಯರೂ ಅಲ್ಲಿ ವಾಸವಾಗಿದ್ದ ಪರಸ್ಥಳದವರೂ ಹೊಸ ಹೊಸ ಸಂಗತಿಗಳನ್ನು ಹೇಳುವುದನ್ನೂ, ಕೇಳುವುದನ್ನೂ ಬಿಟ್ಟು, ಬೇರೆ ಯಾವುದಕ್ಕೂ ಸಮಯ ಕೊಡುತ್ತಿರಲಿಲ್ಲ. 22ಪೌಲನು ಅರಿಯೊಪಾಗದ ಮಧ್ಯದಲ್ಲಿ ನಿಂತುಕೊಂಡು ಹೇಳಿದ್ದೇನಂದರೆ; “ಅಥೇನೆಯ ಜನರೇ, ನೀವು ಎಲ್ಲಾದರಲ್ಲಿಯೂ ಅತಿ ದೈವಭಕ್ತಿವಂತರೆಂದು ನನಗೆ ತೋರುತ್ತಿದೆ. 23ನಾನು ನಿಮ್ಮ ಪಟ್ಟಣದಲ್ಲಿ ತಿರುಗಾಡುತ್ತಾ ನೀವು ಪೂಜಿಸುವ ದೇವತಾ ಪ್ರತಿಮೆಗಳನ್ನು ಚೆನ್ನಾಗಿ ನೋಡುತ್ತಾ ಇದ್ದಾಗ ಒಂದು ಬಲಿಪೀಠವು ನನ್ನ ಕಣ್ಣಿಗೆ ಬಿತ್ತು; ಅದರ ಮೇಲೆ ‘ತಿಳಿಯದ ದೇವರಿಗೆ’ ಎಂದು ಬರೆದಿತ್ತು; ಆದಕಾರಣ ನೀವು ಯಾವುದನ್ನು ತಿಳಿಯದೆ ಪೂಜಿಸುತ್ತಿದ್ದೀರೋ ಅದನ್ನೇ ನಿಮಗೆ ತಿಳಿಯಪಡಿಸುತ್ತೇನೆ, ಕೇಳಿರಿ ಅಂದನು. 24“ಜಗತ್ತನ್ನೂ ಅದರಲ್ಲಿರುವ ಎಲ್ಲವುಗಳನ್ನೂ, ಉಂಟುಮಾಡಿದ ದೇವರು ಭೂಮ್ಯಾಕಾಶಗಳ ಒಡೆಯನಾಗಿರುವುದರಿಂದ ಆತನು ಕೈಯಿಂದ ಕಟ್ಟಿರುವ ಗುಡಿಗಳಲ್ಲಿ ವಾಸಮಾಡುವವನಲ್ಲ; 25ತಾನೇ ಎಲ್ಲರಿಗೂ ಜೀವಶ್ವಾಸ ಹಾಗೂ ಜೀವಿಸುವುದಕ್ಕೆ ಬೇಕಾದದ್ದೆಲ್ಲವನ್ನೂ ಕೊಡುವವನಾಗಿರಲಾಗಿ ಕೊರತೆಯಿದ್ದವನಂತೆ ಮನುಷ್ಯರ ಕೈಗಳಿಂದ ಸೇವೆಹೊಂದುವವನೂ ಅಲ್ಲ. 26ದೇವರು ಒಬ್ಬ ಮನುಷ್ಯನಿಂದ ಎಲ್ಲಾ ಜನಾಂಗಗಳನ್ನು ಸೃಷ್ಟಿಸಿ, ಅವರವರು ಇರತಕ್ಕ ಕಾಲಗಳನ್ನೂ ಹಾಗು ಅವರವರ ನಿವಾಸಗಳ ಮೇರೆಗಳನ್ನೂ ನಿಷ್ಕರ್ಷಿಸಿ ಭೂಮಂಡಲದಲ್ಲೆಲ್ಲಾ ಅವರನ್ನು ಇರಿಸಿ, 27ಒಂದು ವೇಳೆ ಅವರು ತಡವಾಗಿಯಾದರೂ ತನ್ನನ್ನು ಕಂಡುಕೊಂಡಾರೇನೋ ಎಂದು ತನ್ನನ್ನು ಹುಡುಕುವವರನ್ನಾಗಿ ಮಾಡಿದನು. ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ. 28ಏಕೆಂದರೆ ಆತನಲ್ಲಿಯೇ ನಾವು ಜೀವಿಸುತ್ತೇವೆ, ಚಲಿಸುತ್ತೇವೆ ಮತ್ತು ಇರುತ್ತೇವೆ. ನಿಮ್ಮ ಕವಿಗಳಲ್ಲಿ ಕೆಲವರು, ‘ನಾವು ಆತನ ಸಂತಾನದವರೇ’ ಎಂದು ಹೇಳಿದ್ದಾರೆ. 29“ನಾವು ದೇವರ ಸಂತಾನದವರಾದ ಮೇಲೆ ದೇವರು ಮನುಷ್ಯನ ಶಿಲ್ಪವಿದ್ಯೆಯಿಂದಲೂ, ಕಲ್ಪನೆಯಿಂದಲೂ ಕೆತ್ತಿರುವ ಚಿನ್ನ, ಬೆಳ್ಳಿ ಮತ್ತು ಕಲ್ಲುಗಳಿಗೆ ಸಮಾನವೆಂದು ನಾವು ಭಾವಿಸಬಾರದು. 30ಆ ಆಜ್ಞಾನದ ಕಾಲಗಳನ್ನು ದೇವರು ಗಣನೆಗೆ ತೆಗೆದುಕೊಳ್ಳಲಿಲ್ಲ; ಈಗಲಾದರೋ ಆತನು ನಾಲ್ಕು ದಿಕ್ಕಿನಲ್ಲಿರುವ ಮನುಷ್ಯರೆಲ್ಲರೂ ಪಶ್ಚಾತ್ತಾಪಪಟ್ಟು ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪ್ಪಣೆಕೊಡುತ್ತಿದ್ದಾನೆ. 31ಏಕೆಂದರೆ, ಆತನು ನಿಷ್ಕರ್ಷೆಮಾಡಿದ ಪುರುಷನ ಕೈಯಿಂದ ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆ ಮಾಡುವುದಕ್ಕೆ ಒಂದು ದಿನವನ್ನು ಗೊತ್ತು ಮಾಡಿದ್ದಾನೆ. ಅವನನ್ನು ಸತ್ತವರೊಳಗಿಂದ ಎಬ್ಬಿಸಿದ್ದರಲ್ಲಿ ಇದನ್ನು ನಂಬುವುದಕ್ಕೆ ಎಲ್ಲರಿಗೂ ದೃಷ್ಟಾಂತವನ್ನು ಕೊಟ್ಟಿದ್ದಾನೆ” ಅಂದನು. 32ಸತ್ತವರು ಎದ್ದುಬರುವ ವಿಷಯವನ್ನು ಕೇಳಿದಾಗ ಕೆಲವರು ಪೌಲನನ್ನು ಅಪಹಾಸ್ಯಮಾಡಿದರು, ಬೇರೆ ಕೆಲವರು; “ನೀನು ಈ ವಿಷಯದಲ್ಲಿ ಹೇಳುವುದನ್ನು ನಾವು ಇನ್ನೊಂದು ಸಾರಿ ಕೇಳುತ್ತೇವೆ” ಅಂದರು. 33ಹೀಗಿರಲು ಪೌಲನು ಅವರ ಮಧ್ಯದಿಂದ ಹೊರಟುಹೋದನು. 34ಕೆಲವರು ಅವನನ್ನು ಸೇರಿಕೊಂಡು ನಂಬಿದರು; ನಂಬಿದವರಲ್ಲಿ ಅರಿಯೊಪಾಗದ ಸಭೆಯವನಾದ ದಿಯೊನುಸ್ಯನೂ, ದಾಮರಿಯೆಂಬಾಕೆಯೂ ಹಾಗು ಇನ್ನೂ ಕೆಲವರೂ ಇದ್ದರು.
ಸುವಾರ್ತೆ
17ಆ ಮೇಲೆ ಯೇಸು ಅವರೊಂದಿಗೆ ಬೆಟ್ಟದಿಂದ ಇಳಿದು ಸಮಭೂಮಿಯಲ್ಲಿ ಬಂದು ನಿಂತನು. ಆತನ ಶಿಷ್ಯರ ದೊಡ್ಡಗುಂಪು ಮತ್ತು ಎಲ್ಲಾ ಯೂದಾಯದಿಂದಲೂ, ಯೆರೂಸಲೇಮಿನಿಂದಲೂ, ತೂರ್, ಸೀದೋನ್ ಪಟ್ಟಣಗಳ ಕರಾವಳಿತೀರದಿಂದಲೂ ಬಂದಿದ್ದ ಜನರ ಮಹಾಸಮೂಹವು ಆತನ ಸಂಗಡ ಇದ್ದಿತು. 18ಆ ಜನರು ಆತನ ಉಪದೇಶವನ್ನು ಕೇಳುವುದಕ್ಕೂ ತಮ್ಮ ರೋಗಗಳನ್ನು ವಾಡಿಸಿಮಾಡಿಸಿಕೊಳ್ಳುವುದಕ್ಕೂ ಬಂದಿದ್ದರು. ದೆವ್ವಪೀಡಿತರು ಸಹ ಬಂದು ಸ್ವಸ್ಥರಾದರು. 19ಮತ್ತು ಆತನಿಂದ ಶಕ್ತಿ ಹೊರಟು ಎಲ್ಲರನ್ನೂ ವಾಸಿಮಾಡುತ್ತಿದ್ದುದರಿಂದ, ಆ ಗುಂಪಿನ ಜನರೆಲ್ಲಾ ಆತನನ್ನು ಮುಟ್ಟುವುದಕ್ಕೆ ಪ್ರಯತ್ನಪಟ್ಟರು. 20ತರುವಾಯ ಆತನು ತನ್ನ ಶಿಷ್ಯರ ಕಡೆಗೆ ಕಣ್ಣೆತ್ತಿನೋಡಿ ಹೇಳಿದ್ದೇನಂದರೆ, “ಬಡವರಾದ ನೀವು ಧನ್ಯರು; ದೇವರ ರಾಜ್ಯವು ನಿಮ್ಮದೇ. 21ಈಗ ಹಸಿದಿರುವವರಾದ ನೀವು ಧನ್ಯರು; ನಿಮಗೆ ತೃಪ್ತಿಯಾಗುವುದು. ಈಗ ಅಳುವವರಾದ ನೀವು ಧನ್ಯರು; ನೀವು ನಗುವಿರಿ. 22“ಮನುಷ್ಯಕುಮಾರನ ನಿಮಿತ್ತವಾಗಿ ಜನರು ನಿಮ್ಮನ್ನು ಹಗೆಮಾಡಿ ನಿಮಗೆ ಬಹಿಷ್ಕಾರ ಹಾಕಿ ನಿಂದಿಸಿ ನಿಮ್ಮ ಹೆಸರನ್ನು ಕೆಟ್ಟದೆಂದು ತೆಗೆದುಹಾಕಿದರೆ ನೀವು ಧನ್ಯರು. 23ಆ ದಿನದಲ್ಲಿ ಸಂತೋಷಿಸಿ, ಕುಣಿದಾಡುವಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವುದು ಎಂದು ತಿಳಿದುಕೊಳ್ಳಿರಿ. ಈ ಜನರ ಪೂರ್ವಿಕರು ಪ್ರವಾದಿಗಳಿಗೂ ಹಾಗೆಯೇ ಮಾಡಿದರು.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 3 ಅಕ್ಟೋಬರ್ ಎಂದರೆ ನಾಗರಿಕ ಪಂಚಾಂಗದ 16 ಅಕ್ಟೋಬರ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು