Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಯಾತ್ರಿಕರಿಗೆ › ಯೊರ್ದನಿನ ಆಚೆ: ದೀಕ್ಷಾಸ್ನಾನದ ಸ್ಥಳ ಮತ್ತು ನೆಬೋ ಬೆಟ್ಟ › ಮಕೈರೂಸ್

ಯೊರ್ದನಿನ ಆಚೆ: ದೀಕ್ಷಾಸ್ನಾನದ ಸ್ಥಳ ಮತ್ತು ನೆಬೋ ಬೆಟ್ಟ · ತಂಗುದಾಣ 7 · ದಿನ 2

ಮಕೈರೂಸ್

ಬೈಬಲಿನಲ್ಲಿ

ಹೆರೋದ್ಯಳೊಂದಿಗಿನ ತನ್ನ ಮದುವೆಯನ್ನು ಖಂಡಿಸಿದ್ದಕ್ಕಾಗಿ ಹೆರೋದನು ಸ್ನಾನಿಕನಾದ ಯೋಹಾನನನ್ನು ಸೆರೆಮನೆಯಲ್ಲಿ ಹಾಕಿಸಿದ್ದನು; ತನ್ನ ಹುಟ್ಟುಹಬ್ಬದ ಔತಣದಲ್ಲಿ ಆಕೆಯ ಮಗಳ ಬೇಡಿಕೆಯಂತೆ ಯೋಹಾನನ ತಲೆ ಕಡಿಸಿದನು.

ಮಾರ್ಕ 6:17–28ಹೆರೋದನು ತಾನೇ ಕಳುಹಿಸಿ ಯೋಹಾನನನ್ನು ಹಿಡಿದು ಬಂಧಿಸಿ ಸೆರೆಮನೆಯಲ್ಲಿ ಹಾಕಿಸಿದ್ದನು. ಹೆರೋದ್ಯಳ ನಿಮಿತ್ತ ಹಾಗೆ ಮಾಡಿದ್ದನು; ಏಕೆಂದರೆ ಅವನು ತನ್ನ ಅಣ್ಣನಾದ ಫಿಲಿಪ್ಪನ ಹೆಂಡತಿ ಹೆರೋದ್ಯಳನ್ನು ಮದುವೆಯಾಗಿದ್ದನು. ಇದರ ನಿಮಿತ್ತ ಯೋಹಾನನು ಹೆರೋದನಿಗೆ, “ನಿನ್ನ ಅಣ್ಣನ ಹೆಂಡತಿಯು ಆತನು ಬದುಕಿರುವಾಗಲೇ ನಿನ್ನವಳ್ಳಾಗಿರುವುದು ಅಧರ್ಮವಲ್ಲವೇ” ಎಂದು ಹೇಳುತ್ತಿದ್ದನು. ಇದರಿಂದ ಹೆರೋದ್ಯಳು ಸಹ ಯೋಹಾನನ ಮೇಲೆ ದ್ವೇಷವಿಟ್ಟುಕೊಂಡು ಅವನನ್ನು ಕೊಲ್ಲಿಸಬೇಕೆಂದಿದ್ದರೂ ಸಾಧ್ಯವಾಗಲಿಲ್ಲ. ಏಕೆಂದರೆ ಹೆರೋದನು ಯೋಹಾನನನ್ನು ನೀತಿವಂತನೆಂದೂ ಪರಿಶುದ್ಧನೆಂದೂ ತಿಳಿದು ಭಯಪಟ್ಟು ಅವನಿಗೆ ಯಾವ ಅಪಾಯವೂ ಬಾರದಂತೆ ಕಾಪಾಡಿದ್ದನು. ಇದಲ್ಲದೆ ಯೋಹಾನನು ಹೇಳುತ್ತಿದ್ದ ಸಂದೇಶವನ್ನು ಅವನು ಕೇಳಿದಾಗ ಮನಸ್ಸಿನಲ್ಲಿ ಅಸಮಾಧಾನ ಉಂಟಾದರೂ ಅವನ ಮಾತನ್ನು ಸಂತೋಷದಿಂದ ಕೇಳುತ್ತಿದ್ದನು. ಆದರೆ ಹೆರೋದ್ಯಳಿಗೆ ಅನುಕೂಲವಾದ ದಿನ ಬಂದಿತು; ಹೇಗೆಂದರೆ ಹೆರೋದನು ತನ್ನ ಜನ್ಮದಿನದಂದು ಪ್ರಭುಗಳಿಗೂ, ಸಹಸ್ರಾಧಿಪತಿಗಳಿಗೂ, ಗಲಿಲಾಯ ಸೀಮೆಯ ಮುಖ್ಯಸ್ಥರಿಗೂ ಔತಣವನ್ನು ಏರ್ಪಡಿಸಿದಾಗ, ಹೆರೋದ್ಯಳ ಮಗಳು ಒಳಕ್ಕೆ ಬಂದು ನಾಟ್ಯವಾಡಿ ಹೆರೋದನನ್ನೂ ಅವನ ಸಂಗಡ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದ ಅತಿಥಿಗಳನ್ನೂ ಮೆಚ್ಚಿಸಿದಳು. ಅರಸನು ಆ ಹುಡುಗಿಗೆ, “ನಿನಗೆ ಬೇಕಾದದ್ದನ್ನು ಕೇಳಿಕೋ, ಕೊಡುತ್ತೇನೆ. ನೀನು ಏನು ಕೇಳಿಕೊಂಡರೂ ಸರಿ, ನನ್ನ ರಾಜ್ಯದಲ್ಲಿ ಅರ್ಧವನ್ನು ಕೇಳಿದರೂ, ನಿನಗೆ ಕೊಡುತ್ತೇನೆ” ಎಂದು ಪ್ರಮಾಣಮಾಡಿದನು. ಆಗ ಅವಳು ಹೊರಕ್ಕೆ ಹೋಗಿ, “ನಾನು ಏನು ಕೇಳಿಕೊಳ್ಳಲಿ?” ಎಂದು ತನ್ನ ತಾಯಿಯನ್ನು ಕೇಳಲಾಗಿ ಅವಳು, “ಸ್ನಾನಿಕನಾದ ಯೋಹಾನನ ತಲೆಯನ್ನು ಕೇಳಿಕೋ” ಅಂದಳು. ಕೂಡಲೆ ಅವಳು ಅರಸನ ಬಳಿಗೆ ಅವಸರದಿಂದ ಬಂದು, “ಈ ಕ್ಷಣದಲ್ಲೇ ಸ್ನಾನಿಕನಾದ ಯೋಹಾನನ ತಲೆಯನ್ನು ಪರಾತಿನಲ್ಲಿ ನನಗೆ ತರಿಸಿಕೊಡಬೇಕು, ಇದೇ ನನ್ನ ಬೇಡಿಕೆ” ಎಂದು ಕೇಳಿಕೊಂಡಳು. ಅದಕ್ಕೆ ಅರಸನಿಗೆ ಬಹು ದುಃಖವಾಯಿತು. ಅದರೂ ಅತಿಥಿಗಳೆಲ್ಲರ ಮುಂದೆ ತಾನು ಮಾಡಿದ ಪ್ರಮಾಣದ ನಿಮಿತ್ತ ಅವಳ ಕೋರಿಕೆಯನ್ನು ನಿರಾಕರಿಸಲಾಗಲಿಲ್ಲ. ಕೂಡಲೆ ತನ್ನ ಮೈಗಾವಲಿನ ಸಿಪಾಯಿಗಳಲ್ಲಿ ಒಬ್ಬನಿಗೆ, ನೀನು ಹೋಗಿ ಯೋಹಾನನ ತಲೆಯನ್ನು ತಂದುಕೊಡು ಎಂದು ಅಪ್ಪಣೆಕೊಟ್ಟು ಕಳುಹಿಸಿದನು; ಅವನು ಹೋಗಿ ಸೆರೆಮನೆಯಲ್ಲಿ ಅವನ ತಲೆಯನ್ನು ಕಡಿದು ಒಂದು ಪರಾತಿನಲ್ಲಿ ತಂದು ಆ ಹುಡುಗಿಗೆ ಕೊಟ್ಟನು. ಆ ಹುಡುಗಿ ಅದನ್ನು ತನ್ನ ತಾಯಿಗೆ ಕೊಟ್ಟಳು.

ಸಂಪ್ರದಾಯ

ಮಾರ್ಕನು ಆ ಸ್ಥಳವನ್ನು ಹೆಸರಿಸುವುದಿಲ್ಲ. ಯೋಹಾನನನ್ನು ಸಂಕೋಲೆಗಳಲ್ಲಿ ಮಕೈರೂಸಿಗೆ ಕಳುಹಿಸಿ ಅಲ್ಲಿ ಕೊಲ್ಲಲಾಯಿತು ಎಂದು ಇತಿಹಾಸಕಾರ ಜೋಸೀಫಸ್ ಬರೆಯುತ್ತಾನೆ; ಆದ್ದರಿಂದಲೇ ಯಾತ್ರಿಕರು ಇಲ್ಲಿಗೆ ಬರುತ್ತಾರೆ.

ಇಂದು ಇಲ್ಲಿ

ಮೃತ ಸಮುದ್ರದ ಮೇಲಿರುವ ಕಡಿದಾದ ಗುಡ್ಡ, ಹೆರೋದನ ಕೋಟೆ-ಅರಮನೆಯ ಅವಶೇಷಗಳೊಂದಿಗೆ; ಅದರ ಅಂಗಳದ ಕೆಲವು ಕಂಬಗಳನ್ನು ಮತ್ತೆ ನಿಲ್ಲಿಸಲಾಗಿದೆ.

ಪ್ರಯಾಣದ ಮೊದಲು ನಿಮ್ಮ ದೇಶದ ಪ್ರಯಾಣ ಸಲಹೆಯನ್ನು ಪರಿಶೀಲಿಸಿ. ಸ್ಥಳಗಳ ತೆರೆಯುವ ಸಮಯ ಮತ್ತು ನಿಯಮಗಳು ಬದಲಾಗುತ್ತವೆ — ಅವುಗಳ ಅಧಿಕೃತ ಪುಟಗಳನ್ನು ನೋಡಿ.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು