Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಫೆಬ್ರವರಿ 2027 › 9 ಫೆಬ್ರವರಿ

ಆರ್ಥೊಡಾಕ್ಸ್ ಪಂಚಾಂಗ · ಜನವರಿ 27 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 9 ಫೆಬ್ರವರಿ 2027

ಮಂಗಳವಾರ · ಪಂಚಾಶತ್ತಮದ ನಂತರದ 37ನೇ ವಾರ · ಸ್ವರ 3

ಹಬ್ಬಗಳು ಮತ್ತು ಸಂತರು

Translation of the Relics of Saint John Chrysostom (438), Archbishop of Constantinople

ಉಪವಾಸ

ಉಪವಾಸವಿಲ್ಲ

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಸಂಧ್ಯಾ ಪ್ರಾರ್ಥನೆ: ವಾಚನ

ಜ್ಞಾನೋ 10; ಜ್ಞಾನೋ 3; ಜ್ಞಾನೋ 8 (ಆರಿಸಿದ ವಚನಗಳು)

ಸಂಧ್ಯಾ ಪ್ರಾರ್ಥನೆ: ವಾಚನ

ಜ್ಞಾನೋ 10 (ಆರಿಸಿದ ವಚನಗಳು)

ಸಂಧ್ಯಾ ಪ್ರಾರ್ಥನೆ: ವಾಚನ

ಈ ಅನುವಾದದಲ್ಲಿ ಇಲ್ಲ

ಉದಯಕಾಲದ ಪ್ರಾರ್ಥನೆ: ಸುವಾರ್ತೆ

ಯೋಹಾ 10:1–9

1“ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಕುರಿಹಟ್ಟಿಯೊಳಗೆ ಬಾಗಿಲಿನಿಂದ ಬಾರದೆ, ಬೇರೆ ಕಡೆಯಿಂದ ಹತ್ತಿ ಬರುವವನು ಕಳ್ಳನೂ, ದರೋಡೆಕೋರನೂ ಆಗಿದ್ದಾನೆ. 2ಆದರೆ ಬಾಗಿಲಿನ ಮೂಲಕ ಪ್ರವೇಶಿಸುವವನೇ ಆ ಕುರಿಗಳ ಕುರುಬನು. 3ಬಾಗಿಲು ಕಾಯುವವನು ಅವನಿಗೆ ಬಾಗಿಲನ್ನು ತೆರೆಯುತ್ತಾನೆ; ಕುರಿಗಳು ಅವನ ಸ್ವರಕ್ಕೆ ಕಿವಿಗೊಡುತ್ತವೆ. ಅವನು ತನ್ನ ಸ್ವಂತ ಕುರಿಗಳ ಹೆಸರು ಹೇಳಿ ಕರೆದು ಅವುಗಳನ್ನು ಹೊರಗೆ ಬಿಡುತ್ತಾನೆ. 4ತನ್ನ ಕುರಿಗಳನ್ನೆಲ್ಲಾ ಹೊರಗೆ ಬಿಟ್ಟ ಮೇಲೆ ತಾನು ಅವುಗಳ ಮುಂದೆ ಹೋಗುತ್ತಾನೆ. ಕುರಿಗಳು ಅವನ ಸ್ವರವನ್ನು ತಿಳಿದಿರುವುದರಿಂದ ಅವನನ್ನು ಹಿಂಬಾಲಿಸುತ್ತವೆ. 5ಆದರೆ ಅವು ಅಪರಿಚಿತನನ್ನು ಹಿಂಬಾಲಿಸದೇ ಅವನ ಬಳಿಯಿಂದ ಓಡಿಹೋಗುವುದಿಲ್ಲ. ಏಕೆಂದರೆ ಅವು ಅಪರಿಚಿತರ ಸ್ವರವನ್ನು ಗುರುತಿಸುವುದಿಲ್ಲ” ಎಂದು ನಿಮಗೆ ಹೇಳುತ್ತೇನೆ. 6ಈ ಸಾಮ್ಯವನ್ನು ಯೇಸು ಅವರಿಗೆ ಹೇಳಿದನು. ಆದರೂ ಆತನು ಹೇಳಿದ ವಿಷಯಗಳ ಅರ್ಥ ಏನೆಂಬುದು ಅವರು ಗ್ರಹಿಸಲಿಲ್ಲ. 7ಆಗ ಯೇಸು ಪುನಃ ಅವರಿಗೆ, “ನಿಮಗೆ ನಿಜನಿಜವಾಗಿ ಹೇಳುತ್ತೇನೆ; ಕುರಿಗಳಿಗೆ ನಾನೇ ಬಾಗಿಲಾಗಿದ್ದೇನೆ, 8ನನಗಿಂತ ಮೊದಲು ಬಂದವರೆಲ್ಲರು ಕಳ್ಳರೂ, ದರೋಡೆಕೋರರೂ ಆಗಿದ್ದರು. ಆದರೆ ಕುರಿಗಳು ಅವರಿಗೆ ಕಿವಿಗೊಡಲಿಲ್ಲ. 9ನಾನೇ ಆ ಬಾಗಿಲು. ನನ್ನ ಮುಖಾಂತರವಾಗಿ ಯಾವನಾದರೂ ಒಳಗೆ ಪ್ರವೇಶಿಸಿದರೆ ಅವನು ಸುರಕ್ಷಿತನಾಗಿದ್ದು ಒಳಗೆ ಹೋಗುವನು, ಹೊರಗೆ ಬರುವನು ಮತ್ತು ಮೇವನ್ನು ಕಂಡುಕೊಳ್ಳುವನು.

ಪತ್ರಿಕೆ

ಯಾಕೋ 3:1–10

1ನನ್ನ ಸಹೋದರರೇ, ಬೋಧಕರಾದ ನಮಗೆ ಕಠಿಣವಾದ ತೀರ್ಪು ಆಗುವುದೆಂದು ತಿಳಿದುಕೊಂಡು ಬಹಳ ಜನರು ಬೋಧಕರಾಗಬೇಡಿರಿ. 2ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುಮಾಡುವವರಾಗಿದ್ದಾರೆ. ಒಬ್ಬನು ಮಾತಿನಲ್ಲಿ ತಪ್ಪಿ ನಡೆಯದಿದ್ದರೆ ಅವನು ಸರ್ವಸುಗುಣವುಳ್ಳವನೂ ತನ್ನ ಇಡೀ ದೇಹವನ್ನೆಲ್ಲಾ ಸ್ವಾಧೀನಪಡಿಸಿಕೊಳ್ಳುವುದಕ್ಕೆ ಸಮರ್ಥನೂ ಆಗಿದ್ದಾನೆ. 3ಕುದುರೆಗಳು ನಮ್ಮ ಇಚ್ಚೆಯಂತೆ ನಡೆಯುವ ಹಾಗೆ ಅವುಗಳ ಬಾಯಿಗೆ ಕಡಿವಾಣ ಹಾಕುತ್ತೇವೆ. ಆಗ ಅವುಗಳ ದೇಹವನ್ನೆಲ್ಲಾ ನಮಗೆ ಬೇಕಾದ ಕಡೆಗೆ ತಿರುಗಿಸುವುದಕ್ಕೆ ಆಗುತ್ತದೆ. 4ಹಡಗುಗಳನ್ನು ಸಹ ಗಮನಿಸಿರಿ. ಅವು ಬಹು ದೊಡ್ಡವುಗಳಾಗಿದ್ದರೂ ಬಲವಾದ ಗಾಳಿಯಿಂದ ದಿಕ್ಕು ತಪ್ಪುತ್ತದೆ. ಆದರೂ ನಾವಿಕನು ಬಹಳ ಸಣ್ಣ ಚುಕ್ಕಾಣಿಯಿಂದ ಅವುಗಳನ್ನು ತಾನು ಹೋಗ ಬೇಕಾದ ಕಡೆಗೆ ತಿರುಗಿಸಿಕೊಳ್ಳುತ್ತಾನೆ. 5ಹಾಗೆಯೇ ನಾಲಿಗೆಯು ಕೂಡ ಚಿಕ್ಕ ಅಂಗವಾಗಿದ್ದರೂ ದೊಡ್ಡ ಕಾರ್ಯಗಳನ್ನು ಮಾಡುವ ಬಗ್ಗೆ ಕೊಚ್ಚಿಕೊಳ್ಳುತ್ತದೆ. ಬೆಂಕಿಯ ಸಣ್ಣ ಕಿಡಿ ದೊಡ್ಡ ಕಾಡನ್ನೂ ಸುಡುತ್ತದೆ. 6ನಾಲಿಗೆಯೂ ಸಹ ಬೆಂಕಿಯೇ. ನಾಲಿಗೆಯೂ ಅಧರ್ಮ ಲೋಕರೂಪವಾಗಿ ನಮ್ಮ ಅಂಗಗಳ ನಡುವೆ ಇಡಲ್ಪಟ್ಟಿದೆ. ಅದು ದೇಹವನ್ನೆಲ್ಲಾ ಕೆಡಿಸುತ್ತದೆ. ತಾನೇ ನರಕವೆಂಬ ಬೆಂಕಿ ಹೊತ್ತಿಸಿಕೊಳ್ಳುತ್ತಾ ಇಡೀ ಬಾಳಿಗೆ ಬೆಂಕಿ ಹಚ್ಚುತ್ತದೆ. 7ಸಕಲ ಜಾತಿಯ ಮೃಗ, ಪಕ್ಷಿ, ಹರಿದಾಡುವ ಜಂತು, ಜಲಚರಗಳನ್ನೂ ಮನುಷ್ಯರು ಹತೋಟಿಗೆ ತರುವುದುಂಟು ಮತ್ತು ತಂದದ್ದುಂಟು. 8ಆದರೆ ನಾಲಿಗೆಯನ್ನು ಯಾವ ಮಾನವನೂ ಹತೋಟಿಗೆ ತರಲಾರನು. ಅದು ಸುಮ್ಮನಿರಲಾರದ ಕೆಡುಕಾಗಿದೆ. ಮರಣಕರವಾದ ವಿಷದಿಂದ ತುಂಬಿದೆ. 9ಅದೇ ನಾಲಿಗೆಯಿಂದ ನಮ್ಮ ಕರ್ತನಾದ ತಂದೆಯನ್ನು ಕೊಂಡಾಡುತ್ತೇವೆ, ಅದುದರಿಂದಲೇ ದೇವರ ಹೋಲಿಕೆಗೆ ಸಮಾನವಾಗಿ ಸೃಷ್ಟಿಸಲ್ಪಟ್ಟ ಮನುಷ್ಯರನ್ನು ನಾವು ಶಪಿಸುತ್ತೇವೆ. 10ಅದೇ ಬಾಯಿಂದ ಸ್ತುತಿ ಮತ್ತು ಶಾಪ ಎರಡೂ ಬರುತ್ತವೆ. ನನ್ನ ಸಹೋದರರೇ,

ಪತ್ರಿಕೆ (ಸಂತ ಯೋಹಾನ)

ಇಬ್ರಿ 7:26–8:2

26ಇಂಥವನೇ ನಮಗೆ ಬೇಕಾಗಿರುವ ಮಹಾಯಾಜಕನು, ಈತನು ಪರಿಶುದ್ಧನೂ, ನಿರ್ದೋಷಿಯೂ, ನಿಷ್ಕಳಂಕನೂ, ಪಾಪಿಗಳಲ್ಲಿ ಸೇರದೆ ಪ್ರತ್ಯೇಕವಾಗಿರುವವನು, ಆಕಾಶಮಂಡಲಗಳಿಗಿಂತ ಉನ್ನತದಲ್ಲಿರುವವನೂ ಆಗಿರುವನು. 27ಮೊದಲು ತಮ್ಮ ಪಾಪಪರಿಹಾರಕ್ಕಾಗಿ ಆ ಮೇಲೆ ಜನರ ಪಾಪಪರಿಹಾರಕ್ಕಾಗಿ ಯಜ್ಞ ಸಮರ್ಪಣೆಮಾಡುವ ಲೇವಿ ಮಹಾಯಾಜಕರಂತೆ ಈತನು ಪ್ರತಿದಿನವೂ ಯಜ್ಞಗಳನ್ನು ಸಮರ್ಪಿಸಬೇಕಾದ ಅವಶ್ಯವಿಲ್ಲ. ಏಕೆಂದರೆ ಈತನು ತನ್ನನ್ನು ತಾನೇ ಸಮರ್ಪಿಸಿಕೊಂಡು ಒಂದೇ ಸಾರಿ ಆ ಕೆಲಸವನ್ನು ಮಾಡಿ ಮುಗಿಸಿದನು. 28ಧರ್ಮಶಾಸ್ತ್ರವು ದುರ್ಬಲರಾದ ಮನುಷ್ಯರನ್ನು ಮಹಾಯಾಜಕರನ್ನಾಗಿ ನೇಮಕ ಮಾಡುತ್ತದೆ. ಆದರೆ ಧರ್ಮಶಾಸ್ತ್ರದ ತರುವಾಯ ಪ್ರತಿಜ್ಞೆಯೊಡನೆ ಬಂದ ವಾಕ್ಯವು ಸದಾಕಾಲಕ್ಕೂ ಸರ್ವಸಂಪೂರ್ಣನಾಗಿರುವ ಮಗನನ್ನೇ ಯಾಜಕನನ್ನಾಗಿ ನೇಮಕ ಮಾಡಿದೆ. 8:1ನಾವು ಈಗ ಹೇಳುವ ಸಂಗತಿಗಳಲ್ಲಿ ಮುಖ್ಯವಾದ ಮಾತೇನೆಂದರೆ, ಪರಲೋಕದೊಳಗೆ ಮಹೋನ್ನತನ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾದಂಥ ಮಹಾಯಾಜಕನು ನಮಗಿದ್ದಾನೆ. 2ಆತನು ಪವಿತ್ರ ಸ್ಥಾನದಲ್ಲಿ ಮನುಷ್ಯರಿಂದಲ್ಲ, ಕರ್ತನೇ ಹಾಕಿದ ನಿಜವಾದ ದೇವದರ್ಶನ ಗುಡಾರದಲ್ಲಿ ಯಾಜಕೋದ್ಯೋಗ ನಡಿಸುವವನಾಗಿದ್ದಾನೆ.

ಸುವಾರ್ತೆ

ಮಾರ್ಕ 11:11–23

11ತರುವಾಯ ಯೇಸು ಯೆರೂಸಲೇಮನ್ನು ಸೇರಿ ದೇವಾಲಯದೊಳಗೆ ಹೋಗಿ ಸುತ್ತಲೂ ನೋಡಿದನು, ಅಷ್ಟರಲ್ಲಿ ಸಂಜೆಯಾದದ್ದರಿಂದ ಹನ್ನೆರಡು ಮಂದಿ ಶಿಷ್ಯರನ್ನು ಕರೆದುಕೊಂಡು ಬೇಥಾನ್ಯಕ್ಕೆ ಹೊರಟು ಹೋದನು. 12ಮರುದಿನ ಅವರು ಬೇಥಾನ್ಯವನ್ನು ಬಿಟ್ಟು ಬರುತ್ತಿರುವಾಗ ಆತನಿಗೆ ಹಸಿವಾಯಿತು. 13ಎಲೆಗಳಿದ್ದ ಅಂಜೂರದ ಮರವನ್ನು ದೂರದಿಂದ ಕಂಡು ಅದರಲ್ಲಿ ತನಗೇನಾದರೂ ಹಣ್ಣು ಸಿಕ್ಕೀತೆಂದು ಅಲ್ಲಿಗೆ ಹೋದನು. ಅದರ ಹತ್ತಿರಕ್ಕೆ ಬಂದಾಗ ಅದರಲ್ಲಿ ಬರೀ ಎಲೆಗಳನ್ನೇ ಹೊರತು ಮತ್ತೇನೂ ಕಾಣಲಿಲ್ಲ; ಏಕೆಂದರೆ ಅದು ಅಂಜೂರದ ಹಣ್ಣಿನ ಕಾಲವಾಗಿರಲಿಲ್ಲ. 14ಆಗ ಯೇಸು ಆ ಮರಕ್ಕೆ, “ಇನ್ನೆಂದಿಗೂ ಒಬ್ಬರೂ ನಿನ್ನಲ್ಲಿ ಹಣ್ಣನ್ನು ತಿನ್ನದಿರಲಿ” ಎಂದು ಹೇಳಿದನು. ಆತನ ಶಿಷ್ಯರು ಅದನ್ನು ಕೇಳಿಸಿಕೊಂಡರು. 15ಅವರು ಯೆರೂಸಲೇಮಿಗೆ ಬಂದಾಗ ಯೇಸು ದೇವಾಲಯಕ್ಕೆ ಹೋಗಿ ಅದರಲ್ಲಿ ಮಾರುತ್ತಿದ್ದವರನ್ನೂ, ಕೊಳ್ಳುತ್ತಿದ್ದವರನ್ನೂ ಹೊರಡಿಸಿಬಿಡುವುದಕ್ಕೆ ತೊಡಗಿದನು; ನಾಣ್ಯಗಳನ್ನು ವಿನಿಮಯಮಾಡುತ್ತಿದ್ದ ವ್ಯಾಪಾರಿಗಳ ಮೇಜುಗಳನ್ನು ಕೆಡವಿಹಾಕಿದನು; ಪಾರಿವಾಳಗಳನ್ನು ಮಾರುವವರ ಮಣೆಗಳನ್ನು ಉರುಳಿಸಿದನು; 16ಒಬ್ಬನನ್ನಾದರೂ ಸಾಮಾನುಗಳನ್ನು ಹೊತ್ತುಕೊಂಡು ದೇವಾಲಯದೊಳಕ್ಕೆ ಹಾದು ಹೋಗಗೊಡಿಸಲಿಲ್ಲ. 17ಮತ್ತು ಆತನು ಉಪದೇಶಮಾಡಿ, “‘ನನ್ನ ಆಲಯವು ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯವೆನಿಸಿಕೊಳ್ಳುವುದು’ ಎಂದು ಬರೆದಿದೆಯಲ್ಲಾ? ಆದರೆ ‘ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ’” ಎಂದು ಹೇಳಿದನು. 18ಅದನ್ನು ಮುಖ್ಯಯಾಜಕರೂ, ಶಾಸ್ತ್ರಿಗಳೂ ಕೇಳಿ ಅವನನ್ನು ಯಾವ ಉಪಾಯದಿಂದ ಕೊಲ್ಲೋಣ ಎಂದು ಕಾದು ನೋಡುತ್ತಿದ್ದರು; ಏಕೆಂದರೆ ಜನರೆಲ್ಲರೂ ಆತನ ಉಪದೇಶವನ್ನು ಕೇಳಿ ಅತ್ಯಾಶ್ಚರ್ಯಪಟ್ಟಿದ್ದರಿಂದ ಅವರು ಆತನಿಗೆ ಹೆದರುತ್ತಿದ್ದರು. 19ಸಂಜೆಯಾದಾಗ ಯೇಸುವೂ, ಆತನ ಶಿಷ್ಯರೂ ಪಟ್ಟಣವನ್ನು ಬಿಟ್ಟು ಹೊರಗೆ ಹೋಗುತ್ತಿದ್ದರು. 20ಬೆಳಗ್ಗೆ ಅವರು ಬರುತ್ತಿರುವಾಗ ಆ ಅಂಜೂರದ ಮರವು ಬೇರುಸಹಿತ ಒಣಗಿಹೋಗಿರುವುದನ್ನು ಕಂಡರು. 21ಆಗ ಪೇತ್ರನು ಹಿಂದಿನ ದಿನದ ಸಂಗತಿಯನ್ನು ನೆನಪಿಸಿಕೊಂಡು ಆತನಿಗೆ, “ಗುರುವೇ, ಇಗೋ, ನೀನು ಶಾಪ ಕೊಟ್ಟ ಅಂಜೂರದ ಮರವು ಒಣಗಿಹೋಗಿದೆ” ಎಂದು ಹೇಳಿದ್ದಕ್ಕೆ 22ಯೇಸು ಹೇಳಿದ್ದೇನಂದರೆ, “ನಿಮಗೆ ದೇವರಲ್ಲಿ ನಂಬಿಕೆಯಿರಲಿ. 23ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾರಾದರೂ ಈ ಬೆಟ್ಟಕ್ಕೆ, ‘ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು!’ ಎಂದು ಹೇಳಿ ತನ್ನ ಮನಸ್ಸಿನಲ್ಲಿ ಸಂಶಯಪಡದೆ ತಾನು ಹೇಳಿದ್ದು ಆಗುವುದೆಂದು ನಂಬಿದರೆ ಅವನು ಹೇಳಿದಂತೆಯೇ ಆಗುವುದು.

ಸುವಾರ್ತೆ (ಸಂತ ಯೋಹಾನ)

ಯೋಹಾ 10:9–16

9ನಾನೇ ಆ ಬಾಗಿಲು. ನನ್ನ ಮುಖಾಂತರವಾಗಿ ಯಾವನಾದರೂ ಒಳಗೆ ಪ್ರವೇಶಿಸಿದರೆ ಅವನು ಸುರಕ್ಷಿತನಾಗಿದ್ದು ಒಳಗೆ ಹೋಗುವನು, ಹೊರಗೆ ಬರುವನು ಮತ್ತು ಮೇವನ್ನು ಕಂಡುಕೊಳ್ಳುವನು. 10ಕಳ್ಳನಾದರೋ ಕದ್ದುಕೊಳ್ಳುವುದಕ್ಕೂ, ಕೊಯ್ಯುವುದಕ್ಕೂ ಮತ್ತು ನಾಶಮಾಡುವುದಕ್ಕೂ ಬರುತ್ತಾನೆಯೇ ಹೊರತು ಮತ್ತಾವುದಕ್ಕೂ ಬರುವುದಿಲ್ಲ. ನಾನಾದರೋ ಅವುಗಳಿಗೆ ಜೀವವು ಇರಬೇಕೆಂತಲೂ ಅದು ಸಮೃದ್ಧಿಯಾಗಿರಬೇಕೆಂತಲೂ ಬಂದೆನು. 11“ನಾನೇ ಒಳ್ಳೆಯ ಕುರುಬನು. ಒಳ್ಳೆಯ ಕುರುಬನು ತನ್ನ ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ. 12ಕೂಲಿಯಾಳು ಕುರಿಗಳ ಕುರುಬನೂ ಒಡೆಯನೂ ಆಗಿರದೆ, ಅವನು ತೋಳ ಬರುವುದನ್ನು ನೋಡುತ್ತಲೇ ಕುರಿಗಳನ್ನು ಬಿಟ್ಟು ಓಡಿ ಹೋಗುತ್ತಾನೆ. ಆಗ ತೋಳವು ಕುರಿಗಳನ್ನು ಹಿಡಿದುಕೊಂಡು ಮಂದೆಯನ್ನು ಚದರಿಸುತ್ತದೆ. 13ಅವನು ಕೇವಲ ಕೂಲಿಯಾಳಾಗಿರುವುದರಿಂದ, ಕುರಿಗಳ ಚಿಂತೆ ಅವನಿಗಿಲ್ಲದೆ ಓಡಿ ಹೋಗುತ್ತಾನೆ. 14ನಾನೇ ನಿಜವಾದ ಒಳ್ಳೆಯ ಕುರುಬನು. ನನ್ನ ಕುರಿಗಳನ್ನು ನಾನು ಬಲ್ಲವನಾಗಿದ್ದೇನೆ. ನನ್ನ ಕುರಿಗಳು ನನ್ನನ್ನು ಬಲ್ಲವು. 15ತಂದೆಯು ನನ್ನನ್ನು ತಿಳಿದಿರುವಂತೆಯೇ, ನಾನು ತಂದೆಯನ್ನು ತಿಳಿದಿದ್ದೇನೆ; ಮತ್ತು ನಾನು ಕುರಿಗಳಿಗೋಸ್ಕರ ನನ್ನ ಪ್ರಾಣವನ್ನೇ ಕೊಡುತ್ತೇನೆ. 16ಇದಲ್ಲದೆ ಈ ಮಂದೆಗೆ ಸೇರದಿರುವ ಇನ್ನೂ ಬೇರೆ ಕುರಿಗಳು ನನಗಿವೆ, ಅವುಗಳನ್ನೂ ಸಹ ನಾನು ಕರೆ ತರಬೇಕು. ಅವು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಆಗ ಒಂದೇ ಕುರಿಹಿಂಡು ಆಗುವುದು ಮತ್ತು ಒಬ್ಬನೇ ಕುರುಬನು ಇರುವನು.

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 27 ಜನವರಿ ಎಂದರೆ ನಾಗರಿಕ ಪಂಚಾಂಗದ 9 ಫೆಬ್ರವರಿ. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು