Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಡಿಸೆಂಬರ್ 2026 › 29 ಡಿಸೆಂಬರ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 29 ಡಿಸೆಂಬರ್ 2026

ಮಂಗಳವಾರ · ಕ್ರಿಸ್ಮಸ್ ಕಾಲ

ಹಬ್ಬಗಳು ಮತ್ತು ಸಂತರು

ಡಿಸೆಂಬರ್ 29 — ಕ್ರಿಸ್ಮಸ್ ಅಷ್ಟದಿನದ ಐದನೆಯ ದಿನ

ಐಚ್ಛಿಕ ಸ್ಮರಣೆ · ಆರಾಧನಾ ಬಣ್ಣ: ಬಿಳಿ

ಸಂತ ಥಾಮಸ್ ಬೆಕೆಟ್, ಧರ್ಮಾಧ್ಯಕ್ಷ ಮತ್ತು ಹುತಾತ್ಮ · ಸ್ಮರಣೋಲ್ಲೇಖ

ದಿನದ ವಾಚನಗಳು

ಮೊದಲನೆಯ ವಾಚನ

1 ಯೋಹಾ 2:3–11

3ನಾವು ಆತನ ಆಜ್ಞೆಗಳನ್ನು ಅರಿತು ನಡೆಯುವುದರಿಂದಲೇ ಆತನನ್ನು ನಾವು ಬಲ್ಲವರಾಗಿದ್ದೇವೆಂದು ತಿಳಿದುಕೊಳ್ಳುತ್ತೇವೆ. 4ಒಬ್ಬನು, “ನಾನು ಆತನನ್ನು ಬಲ್ಲೆನು” ಎಂದು ಹೇಳಿ ಆತನ ಆಜ್ಞೆಗಳಂತೆ ನಡೆಯದಿದ್ದರೆ ಅವನು ಸುಳ್ಳುಗಾರನಾಗಿದ್ದಾನೆ. ಸತ್ಯವೆಂಬುದು ಅವನಲ್ಲಿ ಇಲ್ಲ. 5ಯಾರಾದರೂ ಆತನ ವಾಕ್ಯವನ್ನು ಅನುಸರಿಸಿ ನಡೆದರೆ ಅವನಲ್ಲಿ ನಿಜವಾಗಿ ದೇವರ ಮೇಲಣ ಪ್ರೀತಿಯು ಪರಿಪೂರ್ಣವಾಗಿದೆ. ಇಂತಹ ಕಾರ್ಯದಿಂದ ನಾವು ಆತನಲ್ಲಿ ಇದ್ದೇವೆಂಬುದನ್ನು ತಿಳಿದುಕೊಳ್ಳುತ್ತೇವೆ. 6ಆತನಲ್ಲಿ ನೆಲೆಗೊಂಡವನಾಗಿದ್ದೇನೆಂದು ಹೇಳುವವನು ಕ್ರಿಸ್ತನು ನಡೆದಂತೆಯೇ ತಾನೂ ನಡೆಯುವುದಕ್ಕೆ ಬದ್ಧನಾಗಿದ್ದಾನೆ. 7ಪ್ರಿಯರೇ, ನಾನು ನಿಮಗೆ ಬರೆಯುವುದು ಹೊಸ ಆಜ್ಞೆಯಲ್ಲ, ಮೊದಲಿನಿಂದಲೂ ನಿಮಗಿದ್ದ ಹಳೆಯ ಆಜ್ಞೆಯಾಗಿದೆ. ಈ ಹಳೆಯ ಆಜ್ಞೆಯು ನೀವು ಕೇಳಿದ ವಾಕ್ಯವೇ. 8ಆದರೂ ನಾನು ನಿಮಗೆ ಬರೆಯುವುದು ಹೊಸ ಆಜ್ಞೆಯಂತೆಯೇ ಇರುವುದು. ಇದು ಆತನಲ್ಲಿಯೂ ನಿಮ್ಮಲ್ಲಿಯೂ ಸತ್ಯವಾಗಿದೆ. ಏಕೆಂದರೆ ಕತ್ತಲೆಯು ಕಳೆದುಹೋಗುತ್ತದೆ. ನಿಜವಾದ ಬೆಳಕು ಈಗ ಪ್ರಕಾಶಿಸುತ್ತಲಿದೆ. 9ಬೆಳಕಿನಲ್ಲಿದ್ದೇನೆಂದು ಹೇಳಿಕೊಂಡು ತನ್ನ ಸಹೋದರನನ್ನು ದ್ವೇಷಿಸುವವನು ಈವರೆಗೂ ಕತ್ತಲೆಯಲ್ಲಿದ್ದಾನೆ. 10ತನ್ನ ಸಹೋದರನನ್ನು ಪ್ರೀತಿಸುವವನು ಬೆಳಕಿನಲ್ಲಿ ನೆಲೆಗೊಂಡಿದ್ದಾನೆ ಮತ್ತು ಪಾಪದಲ್ಲಿ ಎಡವಿಬೀಳುವಂಥದ್ದು ಯಾವುದೂ ಅವನಲ್ಲಿ ಇಲ್ಲ. 11ಆದರೆ ತನ್ನ ಸಹೋದರನನ್ನು ದ್ವೇಷಿಸುವವನು ಕತ್ತಲೆಯಲ್ಲಿದ್ದಾನೆ ಮತ್ತು ಕತ್ತಲೆಯಲ್ಲಿ ನಡೆಯುತ್ತಿದ್ದಾನೆ. ಕತ್ತಲೆಯು ಅವನ ಕಣ್ಣುಗಳನ್ನು ಕುರುಡುಮಾಡಿರುವುದರಿಂದ ತಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂದು ಅವನಿಗೆ ತಿಳಿಯದು.

ಪ್ರತಿವಚನ ಕೀರ್ತನೆ

ಕೀರ್ತ 96:1–3, 5–6

1ಯೆಹೋವನಿಗೆ ಹೊಸ ಕೀರ್ತನೆಯನ್ನು ಹಾಡಿರಿ; ಎಲ್ಲಾ ಭೂನಿವಾಸಿಗಳೇ, ಯೆಹೋವನಿಗೆ ಹಾಡಿರಿ. 2ಯೆಹೋವನಿಗೆ ಹಾಡಿರಿ; ಆತನ ನಾಮವನ್ನು ಕೊಂಡಾಡಿರಿ. ಆತನ ರಕ್ಷಣೆಯನ್ನು ಪ್ರತಿನಿತ್ಯವೂ ಸಾರಿ ಹೇಳಿರಿ. 3ಜನಾಂಗಗಳಲ್ಲಿ ಆತನ ಘನತೆಯನ್ನೂ, ಎಲ್ಲಾ ಜನರಲ್ಲಿ ಆತನ ಅದ್ಭುತಕೃತ್ಯಗಳನ್ನೂ ಪ್ರಸಿದ್ಧಪಡಿಸಿರಿ. 5ಜನಾಂಗಗಳ ದೇವತೆಗಳೆಲ್ಲಾ ಬೊಂಬೆಗಳೇ; ಯೆಹೋವನಾದರೋ ಗಗನಮಂಡಲವನ್ನು ನಿರ್ಮಿಸಿದನು. 6ಆತನ ಸಾನ್ನಿಧ್ಯದಲ್ಲಿ ಘನತೆ ಮತ್ತು ಮಹಿಮೆಗಳೂ, ಆತನ ಪವಿತ್ರಾಲಯದಲ್ಲಿ ಬಲ ಮತ್ತು ಸೌಂದರ್ಯಗಳೂ ಇರುತ್ತವೆ.

ಸುವಾರ್ತೆ

ಲೂಕ 2:22–35

22ಮೋಶೆಯ ಧರ್ಮಶಾಸ್ತ್ರದ ಪ್ರಕಾರ ಅವರ ಶುದ್ಧೀಕರಣದ ದಿನಗಳು ಮುಗಿದ ಮೇಲೆ, “ಚೊಚ್ಚಲು ಗಂಡೆಲ್ಲಾ ಕರ್ತನಿಗೆ ಮೀಸಲೆನಿಸಿಕೊಳ್ಳುವುದು” ಎಂದು ಧರ್ಮಶಾಸ್ತ್ರದಲ್ಲಿ ಬರೆದಿರುವಂತೆ, ಅವರು ಆ ಕೂಸನ್ನು ಕರ್ತನಿಗೆ ಸಮರ್ಪಿಸುವುದಕ್ಕಾಗಿ ಯೆರೂಸಲೇಮಿಗೆ ತೆಗೆದುಕೊಂಡು ಹೋದರು. 24ಇದಲ್ಲದೆ ಕರ್ತನ ಧರ್ಮಶಾಸ್ತ್ರದಲ್ಲಿ ಹೇಳಿರುವಂತೆ ಅವರು “ಒಂದು ಜೋಡಿ ಬೆಳವಕ್ಕಿಯನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ” ಬಲಿಕೊಡಬೇಕಾಗಿತ್ತು. 25ಆ ಕಾಲದಲ್ಲಿ ಯೆರೂಸಲೇಮಿನಲ್ಲಿ ಸಿಮೆಯೋನನೆಂಬ ಒಬ್ಬ ಮನುಷ್ಯನಿದ್ದನು. ಈ ಮನುಷ್ಯನು ನೀತಿವಂತನೂ ದೇವಭಕ್ತನೂ ಆಗಿದ್ದನು. ಇಸ್ರಾಯೇಲರನ್ನು ಸಂತೈಸುವವನು ಯಾವಾಗ ಬರುವನೋ ಎಂದು ನಿರೀಕ್ಷಿಸುತ್ತಾ ಇದ್ದನು ಮತ್ತು ಆತನು ಪವಿತ್ರಾತ್ಮಭರಿತನಾಗಿದ್ದನು. 26ಇದಲ್ಲದೆ, ಕರ್ತನು ಕಳುಹಿಸಬೇಕಾದ ಕ್ರಿಸ್ತನನ್ನು ಕಾಣುವುದಕ್ಕಿಂತ ಮುಂಚೆ ನೀನು ಸಾಯುವುದಿಲ್ಲವೆಂದು ಪವಿತ್ರಾತ್ಮನ ಮೂಲಕ ಅವನಿಗೆ ದೈವೋಕ್ತಿ ಉಂಟಾಗಿತ್ತು. 27ಇವನು ಪವಿತ್ರಾತ್ಮನ ಪ್ರೇರಣೆಯಿಂದ ದೇವಾಲಯಕ್ಕೆ ಬಂದನು. ಆಗ ತಂದೆತಾಯಿಗಳು ಮಗುವಾದ ಯೇಸುವನ್ನು ಧರ್ಮಶಾಸ್ತ್ರದಲ್ಲಿ ಹೇಳಿರುವ ಪದ್ಧತಿಯ ಪ್ರಕಾರ ನಡೆಸಬೇಕೆಂದು ಮಗುವನ್ನು ಒಳಕ್ಕೆ ತರಲು, 28ಸಿಮೆಯೋನನು ಆ ಮಗುವನ್ನು ತನ್ನ ಕೈಯಲ್ಲಿ ಎತ್ತಿಕೊಂಡು ದೇವರನ್ನು ಕೊಂಡಾಡುತ್ತಾ, 29“ಕರ್ತನೇ, ನಿನ್ನ ಮಾತು ನೆರವೇರಿತು; ಈಗ ಸಮಾಧಾನದಿಂದ ಹೋಗುವುದಕ್ಕೆ ನಿನ್ನ ದಾಸನಿಗೆ ಅಪ್ಪಣೆಯಾಯಿತು. 30ನೀನು ಎಲ್ಲಾ ಜನರ ಸಮ್ಮುಖದಲ್ಲಿ ಸಿದ್ಧಪಡಿಸಿದ ಆ ರಕ್ಷಣೆಯನ್ನು ನಾನು ಕಣ್ಣಾರೆ ಕಂಡೆನು. 32ಆತನು ಅನ್ಯಜನರಿಗೆ ಜ್ಞಾನೋದಯದ ಬೆಳಕು, ನಿನ್ನ ಪ್ರಜೆಗಳಾದ ಇಸ್ರಾಯೇಲ್ಯರಿಗೆ ಕೀರ್ತಿ” ಅಂದನು. 33ಆ ಮಗುವಿನ ವಿಷಯವಾಗಿ ಹೇಳಿದ ಈ ಮಾತುಗಳಿಗೆ ಅದರ ತಂದೆತಾಯಿಗಳು ಆಶ್ಚರ್ಯಪಡುತ್ತಿರಲು, 34ಸಿಮೆಯೋನನು ಅವರನ್ನು ಆಶೀರ್ವದಿಸಿ ತಾಯಿಯಾದ ಮರಿಯಳಿಗೆ, “ಇಗೋ, ಈತನು ಇಸ್ರಾಯೇಲ್ ಜನರಲ್ಲಿ ಅನೇಕರು ಬೀಳುವುದಕ್ಕೂ, ಅನೇಕರು ಏಳುವುದಕ್ಕೂ ಕಾರಣನಾಗಿರುವನು ಮತ್ತು ಜನರು ವಿರೋಧಿಸಿ ಮಾತನಾಡುವುದಕ್ಕೂ ಗುರುತಾಗಿರುವನು; 35ಹೀಗೆ ಬಹುಜನರ ಹೃದಯದ ಆಲೋಚನೆಗಳು ಬಹಿರಂಗವಾಗುವವು; ಈ ಕಾರಣಕ್ಕಾಗಿ ಈತನು ಹುಟ್ಟಿದ್ದು. ಇದಲ್ಲದೆ ನಿನ್ನ ಸ್ವಂತ ಮನಸ್ಸಿಗಂತೂ ಅಲಗು ನಾಟಿದಂತೆ ವೇದನೆ ಉಂಟಾಗುತ್ತದೆ” ಎಂದು ಹೇಳಿದನು.

ಇಂದಿನ ಸಂತರು

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು