IRV · ಅಧ್ಯಾಯ 3 / 4
ರೂತಳು 3
1ನವೊಮಿಯು ಸೊಸೆಗೆ, “ನನ್ನ ಮಗಳೇ, ನಿನಗೆ ಒಳ್ಳೆಯದಾಗುವುದಕ್ಕಾಗಿ, ನೀನು ಗೃಹಿಣಿಯಾಗಿ ಸುಖದಿಂದಿರುವುದಕ್ಕೋಸ್ಕರ ನಾನು ಪ್ರಯತ್ನಿಸಬೇಕಲ್ಲವೇ?
2ಈಗ ನೀನು ಯಾರ ಹೆಣ್ಣಾಳುಗಳ ಜೊತೆಯಲ್ಲಿರುತ್ತೀಯೋ ಆ ಬೋವಜನು ನಮ್ಮ ಸಂಬಂಧಿಕನಲ್ಲವೇ? ಅವನು ಈ ರಾತ್ರಿ ಕಣದಲ್ಲಿ ಜವೆಗೋದಿಯನ್ನು ತೂರುವನು.
3ನೀನು ಸ್ನಾನಮಾಡಿ, ಸುಗಂಧತೈಲವನ್ನು ಹಚ್ಚಿಕೊಂಡು, ಶ್ರೇಷ್ಠವಸ್ತ್ರಗಳನ್ನು ಧರಿಸಿಕೊಂಡು ಅಲ್ಲಿಗೆ ಹೋಗು; ಅವನು ಅನ್ನಪಾನಗಳನ್ನು ತೆಗೆದುಕೊಳ್ಳುವವರೆಗೂ ಮರೆಯಾಗಿದ್ದು.
4ಅವನು ಮಲಗಿದ ಸ್ಥಳವನ್ನು ತಿಳಿದುಕೊಂಡು ಹೋಗಿ ಅವನ ಕಾಲುಗಳ ಮೇಲಣ ಹೊದಿಕೆಯನ್ನು ತೆಗೆದು ಬಿಟ್ಟು ಅಲ್ಲೇ ಮಲಗಿಕೋ; ಆ ಮೇಲೆ ಮಾಡತಕ್ಕದ್ದನ್ನು ಅವನು ನಿನಗೆ ತಿಳಿಸುವನು” ಅಂದಳು.
5ಅದಕ್ಕೆ ರೂತಳು “ನೀನು ಹೇಳಿದ ಹಾಗೆಯೇ ಮಾಡುವೆನು” ಎಂದು ಹೇಳಿದಳು.
6ಅತ್ತೆಯ ಆಜ್ಞೆಯಂತೆಯೇ ಕಣಕ್ಕೆ ಹೋಗಿ,
7ಬೋವಜನು ಅನ್ನಪಾನಗಳನ್ನು ತೆಗೆದುಕೊಂಡು ಸಂತುಷ್ಟನಾಗಿ ರಾಶಿಯ ಬಳಿಯಲ್ಲಿ ಮಲಗಿದ ಮೇಲೆ ರಹಸ್ಯವಾಗಿ ಬಂದು ಅವನ ಕಾಲುಗಳ ಮೇಲಣ ಹೊದಿಕೆಯನ್ನು ತೆಗೆದುಬಿಟ್ಟು, ಕಾಲ್ಬದಿಯಲ್ಲಿ ಮಲಗಿದಳು.
8ಮಧ್ಯರಾತ್ರಿಯಲ್ಲಿ ಎಚ್ಚರವಾದಾಗ ಬೋವಜನು ತನ್ನ ಕಾಲುಗಳ ಬಳಿಯಲ್ಲಿ ಮಲಗಿರುವ ಹೆಂಗಸನ್ನು ಕಂಡು,
9ಹೆದರಿ ಆಕೆಯನ್ನು “ನೀನು ಯಾರು?” ಎಂದು ಕೇಳಲು ಆಕೆಯು “ನಾನು ನಿನ್ನ ದಾಸಿಯಾದ ರೂತಳು, ನೀನು ಸಮೀಪಬಂಧುವಾಗಿರುವುದರಿಂದ ನಿನ್ನ ಹೊದಿಕೆಯ ಅಂಚನ್ನು ನನ್ನ ಮೇಲೆ ಹಾಕು” ಅಂದಳು.
10ಆಗ ಅವನು “ಮಗಳೇ, ಯೆಹೋವನಿಂದ ನಿನಗೆ ಆಶೀರ್ವಾದವಾಗಲಿ; ನೀನು ಬಡವರೂ ಅಥವಾ ಐಶ್ವರ್ಯವಂತರೂ ಆದ ಯೌವನಸ್ಥರ ಹಿಂದೆ ಹೋಗಲಿಲ್ಲ. ಈಗ ನಿನ್ನ ಪತಿಭಕ್ತಿಯು ಮೊದಲಗಿಂತ ವಿಶೇಷವಾಗಿ ಪ್ರತ್ಯಕ್ಷವಾಯಿತು.
11ನನ್ನ ಮಗಳೇ, ಈಗ ಭಯಪಡಬೇಡ. ನೀನು ಗುಣವಂತೆಯೆಂಬುದು ಊರಿನವರಿಗೆಲ್ಲಾ ತಿಳಿದಿದೆ; ಆದ್ದರಿಂದ ನೀನು ಹೇಳಿದ್ದನ್ನೆಲ್ಲಾ ಮಾಡುವೆನು.
12ನಾನು ಸಮೀಪಬಂಧುವೆಂಬುದು ನಿಜ; ಆದರೂ ನನಗಿಂತ ಸಮೀಪ ಬಂಧು ಒಬ್ಬನಿದ್ದಾನೆ.
13ಈ ರಾತ್ರಿ ಇಲ್ಲೇ ಇರು; ನಾಳೆ ಅವನು ಮೈದುನಧರ್ಮವನ್ನು ನೆರವೇರಿಸಿದರೆ ಸರಿ; ಇಲ್ಲವಾದರೆ ಯೆಹೋವನಾಣೆ, ನಾನೇ ಅದನ್ನು ನೆರವೇರಿಸುವೆನು. ಬೆಳಗಾಗುವ ತನಕ ಇಲ್ಲೇ ಮಲಗಿಕೋ” ಎಂದು ಹೇಳಿದನು.
14ಆಕೆಯು ಆ ವರೆಗೂ ಅವನ ಕಾಲುಗಳ ಬಳಿಯಲ್ಲೇ ಮಲಗಿಕೊಂಡಿದ್ದಳು. ಒಬ್ಬ ಹೆಂಗಸು ಕಣಕ್ಕೆ ಬಂದಿದ್ದಳೆಂಬುವುದು ಯಾರಿಗೂ ಗೊತ್ತಾಗಬಾರದೆಂದು ಅವನು ಹೇಳಿದ್ದರಿಂದ ಗುರುತು ಹಿಡಿಯಲಾರದಷ್ಟು ಕತ್ತಲಿರುವಾಗಲೇ ಆಕೆಯು ಎದ್ದಳು.
15ಆಗ ಅವನು ಆಕೆಗೆ “ನಿನ್ನ ಮೇಲ್ಹೊದಿಕೆಯನ್ನು ಹಾಸು” ಎಂದು ಹೇಳಿದನು, ಆಕೆ ಹಾಸಲು ಅದರಲ್ಲಿ ಆರು ಪಡಿ ಜವೆಗೋದಿಯನ್ನು ಹಾಕಿ ಹೊರಿಸಿ ಕಳುಹಿಸಿದನು. ಆಕೆಯು ಊರೊಳಕ್ಕೆ ಹೋದಳು.
16ಅತ್ತೆಯ ಬಳಿಗೆ ಬಂದಾಗ, ಅತ್ತೆಯು “ನನ್ನ ಮಗಳೇ, ನೀನು ಹೋಗಿದ್ದ ಕಾರ್ಯವೇನಾಯಿತು?” ಎಂದು ಕೇಳಲು ಆಕೆಯು ಆ ಮನುಷ್ಯನು ಮಾಡಿದ್ದೆಲ್ಲವನ್ನೂ ತಿಳಿಸಿ,
17“‘ನೀನು ಬರಿಗೈಯಿಂದ ಅತ್ತೆಯ ಬಳಿಗೆ ಹೋಗಬಾರದೆಂದು’ ಹೇಳಿ ಈ ಆರು ಪಡಿ ಜವೆಗೋದಿಯನ್ನು ಕೊಟ್ಟನು” ಅಂದಳು.
18ಅತ್ತೆಯು “ನನ್ನ ಮಗಳೇ, ಈ ಕಾರ್ಯವು ಏನಾಗುವುದೆಂದು ಗೊತ್ತಾಗುವವರೆಗೂ ಸುಮ್ಮನಿರು; ಈ ವಿಷಯವನ್ನು ಇತ್ಯರ್ಥ ಮಾಡುವವರೆಗೂ ಅವನಿಗೆ ಸಮಾಧಾನವಿರಲಾರದು” ಎಂದು ಹೇಳಿದಳು.
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ (IRV, 2019) · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. (ಪಠ್ಯ ಬದಲಾಗಿಲ್ಲ; ಅಡಿಟಿಪ್ಪಣಿಗಳು ಮತ್ತು ಶೀರ್ಷಿಕೆಗಳನ್ನು ಬಿಡಲಾಗಿದೆ) · eBible.org