Bible Explorer ಆ್ಯಪ್ ಪಡೆಯಿರಿ

ಬೈಬಲ್ › ಯೆಶಾಯನು › 39

IRV · ಅಧ್ಯಾಯ 39 / 66

ಯೆಶಾಯನು 39

1ಅದೇ ಕಾಲದಲ್ಲಿ ಬಲದಾನನ ಮಗನೂ ಬಾಬೆಲಿನ ಅರಸನೂ ಆದ ಮೆರೋದಕ ಬಲದಾನನೆಂಬುವನು ಹಿಜ್ಕೀಯನು ಅಸ್ವಸ್ಥನಾಗಿದ್ದು ಗುಣಹೊಂದಿದನು ಎಂದು ಕೇಳಿ ಅವನಿಗೆ ಪತ್ರವನ್ನೂ, ಬಹುಮಾನವನ್ನೂ ಕಳುಹಿಸಿದನು.

2ಹಿಜ್ಕೀಯನು ಬಂದ ದೂತರನ್ನು ಸಂತೋಷದಿಂದ ನೋಡಿ ಅವರಿಗೆ ಬೆಳ್ಳಿ, ಬಂಗಾರ, ಸುಗಂಧದ್ರವ್ಯ, ಪರಿಮಳತೈಲ ಮೊದಲಾದ ಪದಾರ್ಥಗಳಿರುವ ಮನೆಯನ್ನೂ, ಆಯುಧಶಾಲೆಯನ್ನೂ, ತನ್ನ ಭಂಡಾರದಲ್ಲಿದುದ್ದೆಲ್ಲವನ್ನೂ ತೋರಿಸಿದನು. ಅವನ ಅರಮನೆಯಲ್ಲಿಯೂ ರಾಜ್ಯದಲ್ಲಿಯೂ ಅವರಿಗೆ ತೋರಿಸದಿದ್ದ ವಸ್ತುವು ಒಂದೂ ಇರಲಿಲ್ಲ.

3ಆಗ ಪ್ರವಾದಿಯಾದ ಯೆಶಾಯನು ಅರಸನಾದ ಹಿಜ್ಕೀಯನ ಬಳಿಗೆ ಬಂದು ಅವನಿಗೆ, “ಆ ಮನುಷ್ಯರು ಎಲ್ಲಿಯವರು? ಏನು ಹೇಳಿದರು?” ಎಂದು ಕೇಳಲು ಅವನು, “ಅವರು ಬಹುದೂರ ದೇಶದಿಂದ ಬಾಬೆಲಿನಿಂದ ನನ್ನ ಬಳಿಗೆ ಬಂದವರು” ಎಂದು ಉತ್ತರಕೊಟ್ಟನು.

4ಯೆಶಾಯನು ತಿರುಗಿ ಹಿಜ್ಕೀಯನಿಗೆ, “ಅವರು ನಿನ್ನ ಅರಮನೆಯಲ್ಲಿ ಏನು ನೋಡಿದರು?” ಎಂದು ಕೇಳಲು ಅವನು, “ಅರಮನೆಯಲ್ಲಿರುವುದೆಲ್ಲವನ್ನೂ ನೋಡಿದರು. ನನ್ನ ಭಂಡಾರದಲ್ಲಿ ನಾನು ಅವರಿಗೆ ತೋರಿಸದಿದ್ದ ವಸ್ತು ಒಂದೂ ಇರುವುದಿಲ್ಲ” ಎಂದನು.

5ಆಗ ಪ್ರವಾದಿಯಾದ ಯೆಶಾಯನು ಹಿಜ್ಕೀಯನಿಗೆ, “ಸೇನಾಧೀಶ್ವರನಾದ ಯೆಹೋವನ ಮಾತನ್ನು ಕೇಳು.

6ಇಗೋ, ನಿನ್ನ ಪೂರ್ವಿಕರ ಕಾಲದಿಂದ ಇಂದಿನವರೆಗೂ ಅರಮನೆಯಲ್ಲಿ ಸಂಗ್ರಹವಾದದ್ದೆಲ್ಲವೂ ಬಾಬಿಲೋನಿಗೆ ಒಯ್ಯಲ್ಪಡುವ ದಿನವು ಬರುವುದು, ಇಲ್ಲೇನೂ ಉಳಿಯುವುದಿಲ್ಲ.

7“ಬಾಬೆಲಿನ ಅರಸನು ಬಂದು, ನೀನು ಪಡೆದ ಮಕ್ಕಳನ್ನು ತೆಗೆದುಕೊಂಡು ಹೋಗಿ ಅವರನ್ನು ತಮ್ಮ ಅರಮನೆಯಲ್ಲಿ ಕಂಚುಕಿಗಳನ್ನಾಗಿ ನೇಮಿಸಿಕೊಳ್ಳುವರು ಅನ್ನುತ್ತಾನೆ” ಎಂದು ಹೇಳಿದನು.

8“ಹೇಗೂ ನನ್ನ ಜೀವಮಾನದಲ್ಲಿ ತಪ್ಪದೆ ಸೌಭಾಗ್ಯವಿರುವುದು” ಎಂದುಕೊಂಡು ಹಿಜ್ಕೀಯನು ಯೆಶಾಯನಿಗೆ, “ನೀನು ತಿಳಿಸಿದ ಯೆಹೋವನ ಮಾತು ಒಳ್ಳೆಯದಾಗಿದೆ” ಎಂದು ಉತ್ತರಕೊಟ್ಟನು.

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ (IRV, 2019) · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. (ಪಠ್ಯ ಬದಲಾಗಿಲ್ಲ; ಅಡಿಟಿಪ್ಪಣಿಗಳು ಮತ್ತು ಶೀರ್ಷಿಕೆಗಳನ್ನು ಬಿಡಲಾಗಿದೆ) · eBible.org